ಸಾಗರ: ನಗರವು ನವವಧುವಿನಂತೆ ಕೇಸರಿ ಬಣ್ಣದ ಚಿತ್ತಾರಗಳಿಂದ ಸಿಂಗಾರಗೊಂಡಿತ್ತು. ಚಾಮರಾಜಪೇಟೆ ವೃತ್ತಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಗಮಿಸುತ್ತಿದ್ದಂತೆ ಅವರನ್ನು ಶಾರದಾಂಬಾ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಅಲ್ಲಿಯ ಸಮಿತಿಯಿಂದ ಶ್ರೀಗಳಿಗೆ ಗೌರವ ಸಮರ್ಪಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಗಳನ್ನು ಭವ್ಯ ಮೆರವಣಿಗೆ ಮೂಲಕ ಅಗ್ರಹಾರದ ಶ್ರೀ ರಾಘವೇಶ್ವರ ಭವನಕ್ಕೆ ಕರೆತರಲಾಯಿತು. ಶನಿವಾರದಿಂದ ಅ.6ರವರೆಗೆ ಸ್ವಾಮೀಜಿ ಮೊಕ್ಕಾಂ ಹೂಡಿ ’ನವರಾತ್ರ ನಮಸ್ಯಾ’ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ. ಪ್ರತಿದಿನದ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ಸಿದ್ಧತೆಗಳು ನಡೆದಿವೆ.
ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ನಾದಸ್ವರ, ಕಹಳೆ, ಚೆಂಡೆ, ಇಪ್ಪತ್ತಕ್ಕೂ ಹೆಚ್ಚು ಭಜನಾ ತಂಡಗಳು ಜನಮನ ಸೆಳೆದವು. ದಾರಿಯುದ್ದಕ್ಕೂ ಎರಡೂ ಕಡೆಗಳಲ್ಲಿ ಜನರು ಕಾದು ನಿಂತು ಶ್ರೀಗಳಿಗೆ ಗೌರವ ಸಮರ್ಪಿಸಿದರು. ಶ್ರೀಗಳಿಗೆ ಜಯಕಾರ, ಎಲ್ಲೆಲ್ಲಿಯೂ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಇಡೀ ಸಾಗರ ನಗರವನ್ನು ಬಂಟಿಂಗ್ಸ್, ಬಾವುಟ, ವಿದ್ಯುತ್ ಅಲಂಕಾರಗಳ ಮೂಲಕ ಸಿಂಗರಿಸಲಾಗಿತ್ತು.
ಪುರ ಪ್ರವೇಶದ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶ್ರೀಗಳಿಗೆ ಪುಷ್ಪಮಾಲೆ ಅರ್ಪಿಸಿ ಸ್ವಾಗತ ಕೋರಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಗೌರವ ಸಮರ್ಪಿಸಿದರು. ಸಿಗಂದೂರು ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್, ಶಿಮುಲ್ ಅಧ್ಯಕ್ಷ ವಿದ್ಯಾಧರ, ಆಪ್ಸ್‌ಕೋಸ್ ಅಧ್ಯಕ್ಷ ಇಂದೂಧರ ಗೌಡ, ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದ್ಯಾವಪ್ಪ, ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ರಾಮಚಂದ್ರ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಗುರುಮೂರ್ತಿ, ಪ್ರಸನ್ನ ಕೆರೆಕೈ, ಮುರಳಿ ಗೀಜಗಾರು, ರಮೇಶ್ ಹೆಗಡೆ ಗುಂಡೂಮನೆ, ಗಣೇಶಪ್ರಸಾದ್, ಕಲ್ಪನಾ ತಲವಾಟ, ಹವ್ಯಕ ಮಹಾಮಂಡಲ ಮಾತೃ ವಿಭಾಗದ ಮುಖ್ಯಸ್ಥೆ ದೇವಿಕಾ ಶಾಸ್ತ್ರಿ, ಟಿ.ಡಿ.ಮೇಘರಾಜ್, ವಿವಿಧ ಸಮಾಜದ ಮುಖಂಡರು ಇದ್ದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ. ಪೂಜ್ಯ ರಾಮಚಂದ್ರಾಪುರ ಮಠದ ಶ್ರೀಗಳು ಸಾಗರದಲ್ಲಿಯೇ ನವರಾತ್ರಿ ಉತ್ಸವ ನಡೆಸುತ್ತಿರುವುದು ನಮಗೆಲ್ಲ ಅತ್ಯಂತ ಸಂತಸ ತಂದಿದೆ. ಕ್ಷೇತ್ರದ ಶಾಸಕನಾಗಿ ಮಠದ ಭಕ್ತನಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.