ನಂಜನಗೂಡು: ಕೊಳ್ಳೆಗಾಲ ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ಎ.ಆರ್.ಕೃಷ್ಣಮೂರ್ತಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಕಂಠೇಶ್ವರಸ್ವಾಮಿ, ಪಾರ್ವತಿದೇವಿ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಎಲ್ಲ ಗುಡಿಗಳಿಗೂ ತೆರಳಿ ದರ್ಶನ ಪಡೆದರು. ದೇವಾಲಯ ವತಿಯಿಂದ ಶ್ವೇತವಸ್ತ್ರ, ಫಲ ತಾಂಬೂಲ ನೀಡಿ ಗೌರವಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು. ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಪಕ್ಷ ಹೊರಡಿಸಿರುವ ಗ್ಯಾರಂಟಿ ಯೋಜನೆಗಳಿಂದ ಎಂಬುದು ಸಾಬೀತಾಗಿದೆ. ಸರ್ಕಾರ ರಚನೆ ಆಗುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸುವತ್ತ ಪಕ್ಷ ದಿಟ್ಟ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರು ದೇವಾಲಯ ಬಳಿ ಆತ್ಮೀಯವಾಗಿ ಬರಮಾಡಿಕೊಂಡರು.
ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಮುಖಂಡರಾದ ಬಿ.ಎಂ.ನಾಗೇಶ್‌ರಾಜ್, ರವಿ, ಶಿವಪ್ಪದೇವರು, ಮೂಗಶೆಟ್ಟಿ, ಶ್ರೀಧರ್, ಉಪ್ಪಿನಹಳ್ಳಿ ಶಿವಣ್ಣ, ಕುಂಬ್ರಹಳ್ಳಿ ಪುರುಷೋತ್ತಮ್, ಸಿಂಗಾರಿಪುರ ನಾಗರಾಜು, ಗೀಕಳ್ಳಿ ಶ್ರೀಕಂಠು ಸೇರಿದಂತೆ ಹಲವರು ಹಾಜರಿದ್ದರು.