ಮದ್ದೂರು: ಪಟ್ಟಣದ ಚನ್ನೇಗೌಡ ಬಡಾವಣೆಯ ಶ್ರೀ ಮಹದೇಶ್ವರಸ್ವಾಮಿ ಹಾಗೂ ನಂದಿ ನಾಗಲಿಂಗೇಶ್ವರ ದೇವಾಲಯದ ದೇವರಬಸವಪ್ಪ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದೆ.
ಕಳೆದ ಹಲವು ವರ್ಷಗಳಿಂದಲೂ ದೇವಾಲಯದಲ್ಲಿ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಜತೆಗೆ ಸುತ್ತಮುತ್ತಲಿನ ಗ್ರಾಮಗಳ ಗೃಹಪ್ರವೇಶ, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತನ್ನದೇ ಆದ ಹಿರಿಮೆ ಹೊಂದಿದ್ದ ಬಸವಪ್ಪ ಮೃತಪಟ್ಟಿದೆ.
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಬಸವಪ್ಪನನ್ನು ದಿನನಿತ್ಯ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ಚಿಕಿತ್ಸೆ ಫಲಿಸದ ಕಾರಣ ಸೋಮವಾರ ಮಧ್ಯಾಹ್ನ ಶಿವೈಕ್ಯವಾಗಿದ್ದು ಸಂಜೆ 5.30ಕ್ಕೆ ತಾಲೂಕಿನ ವೈದ್ಯನಾಥಪುರ ಹೆಬ್ಬಾಗಿಲಿನ ರಸ್ತೆಯಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಲಾಯಿತು.
ಮೃತ ಬಸವಪ್ಪನ ಪಾರ್ಥಿವ ಶರೀರವನ್ನು ಸಿಂಗರಿಸಿದ ಟ್ರಾಕ್ಟರ್‌ನಲ್ಲಿರಿಸಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬಳಿಕ ಸ್ಥಳೀಯರ ಪೂಜಾ ಪುನಸ್ಕಾರದೊಡನೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಅಂತ್ಯಸಂಸ್ಕಾರ ನಡೆಲಸಾಯಿತು.