ಯಗಟಿಪುರ: ಆಷಾಢ ಮಾಸದ ಪ್ರಯುಕ್ತ ಇಲ್ಲಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ (ಕಂದಾಯ) ಡಿ.ಎಸ್.ರಮೇಶ್ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಡೂರು ತಹಸೀಲ್ದಾರ್ ಪೂರ್ಣಿಮಾ ಅವರು ಮಾಹಿತಿ ನೀಡಿದರು.
ದೇವಾಲಯ ಆವರಣ, ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯ ಮುಂಭಾಗದ ಉದ್ಯಾನ ವೀಕ್ಷಿಸಿ ದೇವಾಲಯದ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಟ್ರಸ್ಟ್‌ನಿಂದ ಡಿ.ಎಸ್.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಯಗಟಿಪುರ ಪ್ರಸನ್ನ, ಟ್ರಸ್ಟಿಗಳಾದ ಶಿವಕುಮಾರ್, ಮಲ್ಲಿಕಾರ್ಜುನ, ಟಿ.ಜಿ.ಜಗದೀಶ್, ಕೆ.ವಿ.ಜಯಣ್ಣ, ವೀರೇಶ ಇತರರಿದ್ದರು.
ದೇವಾಲಯದ ಅರ್ಚಕರ ಹುದ್ದೆ ಸಮಸ್ಯೆಗಳ ಬಗ್ಗೆ ಅರ್ಚಕರಿಂದ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಆಯುಕ್ತರು ಕಲ್ಯಾಣಮಂದಿರ, ನಿತ್ಯ ಅನ್ನದಾಸೋಹ, ಪಾರ್ಕ್ ವೀಕ್ಷಿಸಿದರು. ದೇವಾಲಯ ಸೋರುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮೊಬೈಲ್ ಮೂಲಕ ತಿಳಿಸಿದರು.