ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಶ್ರೀದೇವಿ, ಭೂದೇವಿಸಹಿತ ಶ್ರೀ ಬೇಟೆ ರಂಗನಾಥಸ್ವಾಮಿ ಉತ್ಸವ ಮೂರ್ತಿಗಳು. 
ನ್ಯೂಸ್

ಶ್ರೀ ಬೇಟೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ಸಂಪನ್ನ

ಬೀರೂರು: ಪಟ್ಟಣದ ಕರಗಲ್ ಬೀದಿಯ ಶ್ರೀ ಬೇಟೆ ರಂಗನಾಥಸ್ವಾಮಿ ಹಾಗೂ ಶ್ರೀದೇವಿ, ಭೂದೇವಿಯರ ಕಲ್ಯಾಣೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಭಾನುವಾರ ಲೋಕಕಲ್ಯಾಣಾರ್ಥ ಏರ್ಪಡಿಸಿದ್ದ ಮಹೋತ್ಸವಕ್ಕೆ ದೇವಾಲಯವನ್ನು ವಿದ್ಯುತ್ ದೀಪಗಳು, ಬಾಳೆ, ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಶ್ರೀ ರಾಜಗೋಪಾಲ ಆಚಾರ್ಯ ಹಾಗೂ ತಂಡದ ನೇತೃತ್ವದಲ್ಲಿ ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಅಗ್ನಿಪ್ರತಿಷ್ಠೆ, ಕನ್ಯಾವರಣ, ಮಧುಪರ್ಕ ಪೂಜೆ, ಪ್ರತಿಸರ ಬಂಧನ, ಮಂಗಲಾಷ್ಟಕ, ಚೂರ್ಣಿಕಾ, ಮಹಾಸಂಕಲ್ಪಪೂರ್ವಕ ಗೋತ್ರಪ್ರವರ, ಯಜ್ಞೋಪವೀತ ಧಾರಣೆ, ಮಾಂಗಲ್ಯ ಧಾರಣೆ ಮೂಲಕ ದಿವ್ಯ ಕಲ್ಯಾಣೋತ್ಸವ, ಲಾಜ ಹೋಮ, ಅಕ್ಷತಾರೋಪಣ, ಸಪ್ತಪದಿ ಕಾರ್ಯಕ್ರಮದ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಬೆಳಗ್ಗೆ ದೇವಸ್ಥಾನ ಮುಂಭಾಗದಲ್ಲಿ ಹಸಿರು ತೋರಣ ಹಾಗೂ ಪುಷ್ಪಾಲಂಕಾರಗಳಿಂದ ಸಿದ್ಧಪಡಿಸಿದ್ದ ಮಂಟಪಕ್ಕೆ ಶ್ರೀ ಬೇಟೆ ರಂಗನಾಥಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಅರ್ಚಕ ರಾಜು ಅವರ ಕುಟುಂಬದವರು ಶ್ರೀ ಸ್ವಾಮಿಯ ಸನ್ನಿಧಾನದಿಂದ ಮದುಮಗನಾಗಿಸಿಕೊಂಡು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮಂಟಪಕ್ಕೆ ಕರೆತಂದರು. ಕೆ.ಎನ್.ದಾಸಪ್ಪ ಅವರ ಮನೆತನದ ಭಾಗ್ಯಾ ಮತ್ತು ಡಿ.ರಮೇಶ್ ಅವರು ಶ್ರೀದೇವಿಯನ್ನು ಹಾಗೂ ಬೆಳ್ಳುಳ್ಳಿ ತಿಮ್ಮಣ್ಣ ಅವರ ಮನೆತನದ ನಾಗರತ್ನಮ್ಮ ಅವರು ಭೂದೇವಿಯನ್ನು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಮದುಮಗಳಾಗಿಸಿಕೊಂಡು ಮಂಟಪಕ್ಕೆ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದರು. ಬಳಿಕ ಪುರೋಹಿತರ ನೇತೃತ್ವದಲ್ಲಿ ಸಂಪ್ರದಾಯದಂತೆ ಶ್ರೀದೇವಿ, ಭೂದೇವಿಸಹಿತ ಶ್ರೀ ಬೇಟೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಮಂಗಳಸೂತ್ರ ಧಾರಣೆ ಸಂದರ್ಭದಲ್ಲಿ ನೆರೆದಿದ್ದ ಭಕ್ತ ವೃಂದ ವೆಂಕಟರಮಣ ಸ್ವಾಮಿ ಪಾದಕ್ಕೆ ಗೋವಿಂದಾ ಗೋವಿಂದಾ... ಎಂಬ ಘೋಷಗಳನ್ನು ಕೂಗಿದರು. ತಿರುಪತಿಯ ಶ್ರೀನಿವಾಸನ ಕಲ್ಯಾಣದಂತೆ ಬೇಟೆ ರಂಗನಾಥಸ್ವಾಮಿಯ ಕಲ್ಯಾಣ ಮಹೋತ್ಸವ ನೆರವೇರಿಸಿದ ಗಂಗಾಮತಸ್ಥರ ಸಂಘದ ಸಮಿತಿಯ ಕಾರ್ಯಕ್ಕೆೆ ಭಕ್ತರು ಪ್ರಶಂಸಿಸಿದರು. ಸಂಜೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಸಾರೋಟಿನಲ್ಲಿ ಮಂಗಳವಾದ್ಯ ಮತ್ತು ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಉತ್ಸವ ಮೂರ್ತಿಗಳ ಶೋಭಾಯಾತ್ರೆಯೊಂದಿಗೆ ಕಲ್ಯಾಣೋತ್ಸವ ಸಂಪನ್ನಗೊಂಡಿತು. ದೇವಸ್ಥಾನ ಸಮಿತಿ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.