ನ್ಯೂಸ್

ಶ್ರೀ ನೀಲಕಂಠೇಶ್ವರ ದೇವಾಲಯದ ಬೆಳ್ಳಿ ಕವಚದ ಗರ್ಭಗುಡಿಗೆ ಚಾಲನೆ

ಚಿತ್ರದುರ್ಗ:ಶಿವರಾತ್ರಿ ಮಹೋತ್ಸವದ ಮುನ್ನಾ ದಿನ ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಅಂದಾಜು 60 ಕೆಜಿ ಬೆಳ್ಳಿ ಬಳಸಿರುವ ಬೆಳ್ಳಿ ಕವಚದ ಗರ್ಭಗುಡಿಯ ಉದ್ಘಾಟನಾ ಸಮಾರಂಭ ಡಾ.ಶಿವಮೂರ್ತಿ ಮುರುಘಾ ಶರಣರ ಸಾನ್ನಿಧ್ಯ ಬುಧವಾರ ನೆರವೇರಿತು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ವೀರಶೈವ ಸಮಾಜದ ಪ್ರಮುಖರು ಉಪಸ್ಥಿತರಿದ್ದ ಕಾರ‌್ಯಕ್ರಮವನ್ನು ಉದ್ದೇಶಿಸಿ ಮಾತ ನಾಡಿದ ಶರಣರು,ಶಿವರಾತ್ರಿಯ ಜಾಗರಣೆ ಎಂದರೆ ಸಿನಿಮಾ ರಾತ್ರಿ ಎಂದಾಗಿದೆ. ವರ್ಷದ ಒಂದು ದಿನ ಶಿವರಾತ್ರಿ,ಇನ್ನುಳಿದ 364 ದಿನ ಕತ್ತಲ ರಾತ್ರಿ ಎಂದಾಗ ಬಾರದು. ಜಾಗರಣೆ ಎಂದರೆ ನಮ್ಮನ್ನು ಜಾಗೃತಗೊಳಿಸುವುದಾಗಿದೆ.
ಶಿವನ ಇನ್ನೊಂದು ಪೌರಾಣಿಕ ಪರಿ ಕಲ್ಪನೆಯಾಗಿರುವ ನೀಲಕಂಠೇಶ್ವರನ ಈ ಗುಡಿಗೆ ಬೆಳ್ಳಿ ಕವಚವನ್ನು ಹೊದಿಸುವ ಮೂಲಕ ಭಕ್ತರು ಧನ್ಯತಾ ಭಾವವನ್ನು ಮೆರೆದಿದ್ದಾರೆ. ಎಲ್ಲ ಕಾಲದಲ್ಲೂ ಎಲ್ಲರೂ ದೇವಾಲಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಬ್ಬ ಹರಿದನಗಳ ಸಮಯದಲ್ಲಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ.
ಆದರೆ ಇನ್ನುಳಿದ ಸಮಯದಲ್ಲಿ ಶಿವ ಧ್ಯಾನವನ್ನು ಮರೆಯದಿರಲು ಅಂಗದ ಮೇಲೆ ಇಷ್ಟ ಲಿಂಗವನ್ನು ಧರಿಸಿ ಶಿವನನ್ನು ಆರಾಧಿಸ ಬೇ ಕೆಂದರು. ಶಿವರಾತ್ರಿ ಮಹೋತ್ಸವದ ಅಂಗವಾಗಿ ಅಥಣಿಯಲ್ಲಿ ನಡೆಯುವಂಥ ಶಿವಯೋಗ ಕಾರ‌್ಯಕ್ರಮದ ಕುರಿತು ಅಭಿಮಾನದ ಮಾತುಗಳನ್ನಾಡಿದ ಶರಣರು,ಭಕ್ತರು ಒಮ್ಮೆಯಾದರೂ ಶಿವರಾತ್ರಿ ಸಮಯದಲ್ಲಿ ಅಥಣಿಗೆ ತೆರಳಿ ಅಲ್ಲಿಯ ಭಕ್ತಿ ವೈಭವವನ್ನು ನೋಡ ಬೇಕೆಂದರು. ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ,ವೀರಶೈವ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್,ರಾಜಪ್ಪ,ಕೆಇಬಿ ಷಣ್ಮುಖಪ್ಪ,ಮಹಡಿ ಶಿವಮೂರ್ತಿ, ಸೋನಿ ಸಮಾಜದ ಪ್ರಮುಖರು ಮತ್ತಿತರರು ಗಣ್ಯರು ಇದ್ದರು. ಈ ವೇಳೆ ಕಾರಂಪೆಂಟರ್ ರವಿ ಹಾಗೂ ಬೆಳ್ಳಿ ಕವಚ ನಿರ್ಮಿಸಿದ ವೆಂಕಟೇಶ್ ಹಾಗೂ ಬೆಳ್ಳಿಯ ದಾನಿಗಳನ್ನು ಗೌರವಿಸಲಾಯಿತು.