ಆ.2 ರಂದು ಧಾರ್ಮಿಕ ಕಾರ್ಯಕ್ರಮ
ಹನೂರು : ಶ್ರೀ ಮಲೆಮಹದೇಶ್ವರ ಸ್ವಾಮಿಯನ್ನು ಸದಾ ಆರಾಧಿಸುತ್ತಾ ಕಾಯಕಯೋಗಿ ಎನಿಸಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಲಿಂಗೈಕ್ಯ ಶ್ರೀಗುರುಸ್ವಾಮೀಜಿ ಅವರ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಆ.2 ರಂದು ನಾಡಿನ ವಿವಿಧ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಭರದಿಂದ ನಡೆದಿದೆ.
ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದರು : ಬಾಲ್ಯದಲ್ಲಿಯೇ ಶ್ರೀ ಮಹದೇಶ್ವರರ ಪ್ರಭಾವಕ್ಕೆ ಒಳಗಾಗಿ ಪರಮ ಭಕ್ತರಾದ ಶ್ರೀಗಳು ಮಠದ ಧಾರ್ಮಿಕ ಜವಾಬ್ದಾರಿಗಳೊಂದಿಗೆ ದಾಸೋಹ ಹಾಗೂ ಕೃಷಿ ಕಾಯಕವನ್ನು ನಿರ್ವಹಿಸಿದರು, ಶೈಕ್ಷಣಿಕ ಸೇವೆಗೂ ಮಹತ್ವ ನೀಡಿದರು. ಇದಕ್ಕಾಗಿ ಹೊರ ರಾಜ್ಯದ ಭಕ್ತರಿಂದಲೂ ಬೆಂಬಲ ಗಳಿಸಿದರು. ಅಂದಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ದೇಗುಲ ಮಠದ ಮುಮ್ಮಡಿ ಶ್ರೀ ನಿರ್ವಾಣ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ಗುರುಸ್ವಾಮೀಜಿ ಮುನ್ನಡೆದರು. ನಿತ್ಯ ದಾಸೋಹ ಸೇವೆ, ಮಹದೇಶ್ವರ ದೇಗುಲದ ಅಭಿವೃದ್ಧಿ, ಮಠದ ಪ್ರಗತಿ ಹಾಗೂ ಬೇಡಗಂಪಣರ ಕಲ್ಯಾಣಕ್ಕೆ ಒತ್ತು ನೀಡಿದರು.
ಸಾಮಾಜಿಕ, ಧಾರ್ಮಿಕ ಕಳಕಳಿಯ ಈ ಸಂತ 2025ರ ಮೇ 20 ರಂದು ಲಿಂಗೈಕ್ಯರಾದರು. ವಿವಿಧ ಮಠಾಧೀಶರು ಭಾಗಿ: ಆ.2 ರಂದು ಬೆಳಗ್ಗೆ 5 ಗಂಟೆಗೆ ಲಿಂಗೈಕ್ಯ ಶ್ರೀಪಟ್ಟದ ಗುರುಸ್ವಾಮೀಜಿ ಅವರ ಗದ್ದುಗೆಗೆ ಹಾಗೂ ಮಠದ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ನೆರವೇರಲಿದೆ. 8 ಗಂಟೆಗೆ ಷಟ್‌ಸ್ಥಳ ಧ್ವಜಾರೋಹಣವನ್ನು ಮಲ್ಲನಮೂಲೆ ಗುರುಕಂಬಳೀಶ್ವರ ಮಠದ ಶ್ರೀ ಚನ್ನಬಸವ ಸ್ವಾಮೀಜಿ ನೆರವೇರಿಸಲಿದ್ದಾರೆ. 10ಕ್ಕೆ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗುರುಸ್ಮತಿ ಸಂಸ್ಮರಣಾ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದಾರೆ. ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾಚೀದೇವ ಸಂಸ್ಥಾನದ ಶ್ರೀ ಮಾಚಿದೇವ ಸ್ವಾಮೀಜಿ, ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಹಾಗೂ ನಾಡಿನ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಶ್ರೀ ಮಲೆಮಹದೇಶ್ವರ ಕೃತಿಯನ್ನು ಶಾಸಕ ಎಂ.ಆರ್ ಮಂಜುನಾಥ್
ಬಿಡುಗಡೆ ಮಾಡಲಿದ್ದಾರೆ. ವಿದ್ಯಾರ್ಥಿನಿಲಯದ ಕಟ್ಟಡದ ಶಿಲಾನ್ಯಾಸವನ್ನು ಎಚ್‌ಎಎಲ್ ಅಧ್ಯಕ್ಷ ಡಿ.ಕೆ ಸುನೀಲ್ ನೆರವೇರಿಸಲಿದ್ದಾರೆ. ನಾಡಿನ 150ಕ್ಕೂ ಹೆಚ್ಚು ಮಠಾಧೀಶರು, ಜನಪ್ರತಿನಿಧಿಗಳು, ಸಾವಿರಾರು ಭಕ್ತರು ಸಂಗಮಗೊಳ್ಳಲಿದ್ದಾರೆ.