ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬಿಟ್ ಕಾಯಿನ್ ದಂಧೆಯ ಕಿಂಗ್ಪಿನ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ರಾಜಕೀಯ ಮುಖಂಡರ ಮಕ್ಕಳು ಸಾಥ್ ಕೊಟ್ಟಿದ್ದಾರೆ ಎನ್ನುವುದು ಈ ಹಿಂದಿನ ಪ್ರಕರಣಗಳಿಂದ ತಿಳಿದುಬಂದಿದೆ. ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳ ಆರೋಪಪಟ್ಟಿಯಲ್ಲಿ ಈ ವಿಚಾರ ಹೇಳಲಾಗಿದ್ದು, ಶ್ರೀಕಿ ಜತೆಗೆ ಕಾಂಗ್ರೆಸ್ನ ಹಾಲಿ ಮತ್ತು ಮಾಜಿ ಶಾಸಕರು ಕೈಜೋಡಿಸಿದ್ದಾರೆ ಎಂದು ನಮೂದಿಸಲಾಗಿದೆ.
2018ರಲ್ಲಿ ಯುಬಿ ಸಿಟಿಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಹಾಗೂ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ಡ್ರಗ್ಸ್ ಪಾರ್ಸೆಲ್ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಹ್ಯಾಕರ್ ಶ್ರೀಕಿ ಆರೋಪಿಯಾಗಿದ್ದಾನೆ.
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಎ.ಹ್ಯಾರಿಸ್ ಮಕ್ಕಳಾದ ಮಹಮ್ಮದ್ ನಲಪಾಡ್ ಮತ್ತು ಒಮರ್ ನಲಪಾಡ್ ಜತೆಗಿನ ಸ್ನೇಹದ ಬಗ್ಗೆ ಶ್ರೀಕಿ ಬಾಯಿಬಿಟ್ಟಿದ್ದಾನೆ. ಆಬಳಿಕ 2020ರ ನವೆಂಬರ್ನಲ್ಲಿ ಕೆಂಪೇಗೌಡನಗರ ಠಾಣೆ ಡ್ರಗ್ಸ್ ಕೇಸ್ನಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನಕ್ಕೆ ಒಳಗಾಗಿ ಶ್ರೀಕಿ ಜತೆಗಿನ ಅಕ್ರಮ ದಂಧೆ ಬಗ್ಗೆ ಒಪ್ಪಿಕೊಂಡಿದ್ದಾನೆ. ಕಾಂಗ್ರೆಸ್ ಮುಖಂಡರ ಜತೆಗೆ ಉದ್ಯಮಿ ಮತ್ತು ವೈದ್ಯರ ಮಕ್ಕಳು ಶ್ರೀಕಿ ಜತೆ ಒಡನಾಟ ಇಟ್ಟುಕೊಂಡು ಬಿಟ್ ಕಾಯಿನ್ ಮತ್ತು ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಈ ಎಲ್ಲ ಅಂಶವೂ ಎರಡೂ ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ.
ಹಗರಣವೇ ಬೋಗಸ್: ಬಿಟ್ ಕಾಯಿನ್ ಹಗರಣವೇ ಬೋಗಸ್ ಎಂದು ಹ್ಯಾಕರ್ ಶ್ರೀಕಿ ಹೇಳಿದ್ದಾನೆ. ಮಂಗಳವಾರ ಜಾಮೀನು ಪಡೆದು ಬುಧವಾರ ಜೈಲಿನಿಂದ ಹೊರಬಂದ ನಂತರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾವಿರಾರು ಕೋಟಿ ರೂ. ಹಗರಣ ಎನ್ನುವುದೆಲ್ಲ ಸುಳ್ಳು. ಇದೆಲ್ಲ ಮಾಧ್ಯಮಗಳಿಂದ ಸೃಷ್ಟಿ ಆಗುತ್ತಿದೆ. ಇದರಲ್ಲಿ ಯಾರು ಇದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪೊಲೀಸರೂ ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾನೆ.
ದಿನಕ್ಕೆ 2.5 ಲಕ್ಷ ರೂ. ಸಂಪಾದನೆ: 2018ರ ಫೆಬ್ರವರಿಯಲ್ಲಿ ಯುಬಿ ಸಿಟಿಯಲ್ಲಿ ವಿದ್ವತ್ ಮೇಲೆ ಮಹಮ್ಮದ್ ನಲಪಾಡ್ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶ್ರೀಕಿ 14ನೇ ಆರೋಪಿಯಾಗಿದ್ದ. ಆರೋಪಿಗಳು ಬಂಧನಕ್ಕೆ ಒಳಗಾದರೂ ಶ್ರೀಕಿ ಮಾತ್ರ ಸಿಗದೆ 4 ತಿಂಗಳ ಬಳಿಕ ಜಾಮೀನು ಪಡೆದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದ. ಈ ವೇಳೆ ವಿದೇಶಕ್ಕೆ ವ್ಯಾಸಂಗಕ್ಕಾಗಿ ಹೋಗಿದ್ದಾಗ, ಅಲ್ಲೇ ಓದು ಮುಗಿಸಿ ಸ್ಥಳೀಯ ಸ್ನೇಹಿತರ ಜತೆ ಸೇರಿ ಬಿಟ್ ಕಾಯಿನ್ ಎಕ್ಸ್ಚೇಂಜ್ ಮೂಲಕ ದಿನಕ್ಕೆ 45-85 ಲಕ್ಷ ರೂ.ವರೆಗೆ ವ್ಯವಹಾರ ನಡೆಸುತ್ತಿದ್ದ. ‘ಶೇ.3ರಿಂದ 5 ಲಾಭಾಂಶ ಪಡೆಯುತ್ತಿದ್ದೆ (2.2 ಲಕ್ಷ ರೂ.ವರೆಗೆ) ಸ್ನೇಹಿತರೇ ಎಲ್ಲವನ್ನು ಕಳವು ಮಾಡಿದರು. 2015ರಲ್ಲಿ ಬೆಂಗಳೂರಿಗೆ ಬಂದು ನಲಪಾಡ್ ಗ್ಯಾಂಗ್ ಸೇರಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದೆ. ಆಬಳಿಕ ಪ್ರಸಿಧ್ ಶೆಟ್ಟಿ ಮೂಲಕ ಸುನೀಶ್ ಹೆಗಡೆ ಗ್ಯಾಂಗ್ ಪರಿಚಯವಾಯಿತು. ಬಳಿಕ ಬಿಟ್ ಕಾಯಿನ್ ಅಧಿಕೃತ ಪೋರ್ಟಲ್ ಬಳಸಿ ಅಕ್ರಮ ಎಸಗುತ್ತಿದ್ದೆ’ ಎಂದು ಹೇಳುವ ಮೂಲಕ ನಲಪಾಡ್ ಸ್ನೇಹವನ್ನು ಶ್ರೀಕಿ ಉಲ್ಲೇಖಿಸಿದ್ದಾನೆ.
ಡಾರ್ಕ್ ವೆಬ್ನಲ್ಲಿ ಡ್ರಗ್ಸ್ ದಂಧೆ: ವಿದ್ವತ್ ಹಲ್ಲೆ ಪ್ರಕರಣ ತಣ್ಣಗಾದ ಮೇಲೆ ಶ್ರೀಕಿ, ಒಮರ್ ನಲಪಾಡ್, ದರ್ಶನ್ ಲಮಾಣಿ ಗ್ಯಾಂಗ್ ಮತ್ತೆ ಒಂದಾಯಿತು. ಡಾರ್ಕ್ ವೆಬ್ಸೈಟ್ನಲ್ಲಿ ವಿದೇಶಿ ಪೆಡ್ಲರ್ನನ್ನು ಸಂರ್ಪಸಿ, ಬಿಟ್ ಕಾಯಿನ್ ಕೊಟ್ಟು ವಿದೇಶಿ ಅಂಚೆ ಕಚೇರಿಗೆ ಡ್ರಗ್ಸ್ ಪಾರ್ಸೆಲ್ ತರಿಸುತ್ತಿದ್ದರು. ಆನಂತರ ಮಾರಾಟ, ಸೇವನೆ ಮಾಡುತ್ತಿದ್ದರು. ಇದಕ್ಕೆ ಶ್ರೀಕಿಯೇ ಕಿಂಗ್ಪಿನ್ ಆಗಿದ್ದ. ಈ ಕೇಸ್ನಲ್ಲಿ 2020ರ ನ.4ರಂದು ಪೆಡ್ಲರ್ ಬಂಧನಕ್ಕೆ ಒಳಗಾದ ಮೇಲೆ ಉಳಿದವರು ತಲೆಮರೆಸಿಕೊಂಡಿದ್ದರು. ಆಗ ದರ್ಶನ್ ಲಮಾಣಿ ತನ್ನ ಸ್ನೇಹಿತನಿಗೆ ರಾಣೆಬೆನ್ನೂರಿನ ವಸತಿ ಗೃಹದಲ್ಲಿ ಆಶ್ರಯ ನೀಡಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮರುದಿನ ದರ್ಶನ್ ಜತೆಯಲ್ಲೇ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಶ್ರೀಕೃಷ್ಣ, ಉಮರ್ ನಲಪಾಡ್ ಮತ್ತಿತರರು ಜತೆಗಿದ್ದರು. ಅಲ್ಲದೆ, 2018ರಲ್ಲಿ ಶ್ರೀಕಿಗೆ ಹಣದ ಅವಶ್ಯಕತೆ ಇರುವ ಕಾರಣಕ್ಕೆ 30 ಬಿಟ್ ಕಾಯಿನ್ಗಳನ್ನು ಆತನ ವ್ಯಾಲೆಟ್ಗೆ ಕಳುಹಿಸಿರುವುದಾಗಿ ದರ್ಶನ್ ಸಿಸಿಬಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.