ಸಿವಿಲ್ಸ್​ನ ಐಎಫ್​ಎಸ್​ ನಲ್ಲಿ 82ನೇ ರ‍್ಯಾಂಕ್ ಪಡೆದ ಎಂ.ಜಿ.ವೆಂಕಟೇಶ್​ ತನ್ನ ಕುಟುಂಬದೊಂದಿಗೆ. 
ನ್ಯೂಸ್

ಶ್ರದ್ಧೆಯಿದ್ದರೆ ಗುರಿ ಸಾಧನೆ ಸುಲಭ; ಸರ್ಕಾರಿ ಶಾಲೆಯಲ್ಲೇ ಓದಿ ಸಿವಿಲ್​ ಸರ್ವೀಸ್​ನಲ್ಲಿ 82ನೇ ರ‍್ಯಾಂಕ್​ ಪಡೆದ ವೆಂಕಟೇಶ್​

ರಾಯಲ್ಪಾಡು: ಯಾರಲ್ಲಿ ಶ್ರದ್ಧೆ, ಭಕ್ತಿ, ಗುರಿ ಸಾಧಿಸಬೇಕೆಂಬ ಛಲ ಇರುತ್ತದೆಯೋ ಅವರಿಗೆ ವಿದ್ಯಾದೇವತೆ ಒಲಿಯುತ್ತಾಳೆ ಎಂಬುದಕ್ಕೆ ರಾಯಲ್ಪಾಡು ಸಮೀಪದ ಮಂಚಿನೀಳ್ಳಕೋಟೆಯ ರೈತನ ಮಗ ಎಂ.ಜಿ.ವೆಂಕಟೇಶ್​ ಸಾಕ್ಷಿಯಾಗಿದ್ದಾರೆ.


ಪ್ರಸ್ತುತ ಸಿವಿಲ್​ ಸರ್ವೀಸ್​ ಆಯ್ಕೆ ಪಟ್ಟಿಯಲ್ಲಿ 82ನೇ ರ‍್ಯಾಂಕ್ ಪಡೆದು ಐಎಫ್​ಎಸ್​ನಲ್ಲಿ ಆಯ್ಕೆಯಾಗುವ ಮೂಲಕ ರೈತನ ಮಗ ಸಾಧಿಸಿ ತೋರಿಸಿದ್ದಾನೆ. ಮಂಚಿನೀಳ್ಳಕೋಟೆಯ ಕೃಷಿಕ ಗಂಗಪ್ಪ, ಲಕ್ಷ್ಮಿ ನರಸಮ್ಮ ದಂಪತಿಯ ಎಂ.ಜಿ.ವೆಂಕಟೇಶ್​ ಹಾಗೂ ಎಂ.ಜಿ.ಮುರಳಿ ಇಬ್ಬರೂ ಸರ್ಕಾರಿ ಶಾಲೆಗಳಲ್ಲಿಯೇ ಉನ್ನತ ಶಿಕ್ಷಣ ಪಡೆದಿದ್ದಾರೆ.


ಎಂ.ಜಿ.ವೆಂಕಟೇಶ್​ 1ರಿಂದ 5 ನೇ ತರಗತಿವರೆಗೂ ಗ್ರಾಮದ ಸರ್ಕಾರಿ ಶಾಲೆಯಲ್ಲಿ, 6 ರಿಂದ 7 ನೇ ತರಗತಿ ಮರಿಮಾಕಲಪಲ್ಲಿ ಸರ್ಕಾರಿ ಶಾಲೆಯಲ್ಲಿ, 8ರಿಂದ 10ನೇ ತರಗತಿ ರಾಯಲ್ಪಾಡಿನ ಪ್ರೌಢಶಾಲೆ, ಪದವಿ ಶಿಕ್ಷಣವನ್ನು ಬೈರವೇಶ್ವರ ವಿದ್ಯಾನಿಕೇತನ ಕಾಲೇಜಿನಲ್ಲಿ ಪಡೆದು, ಪ್ರಥಮ ದರ್ಜೆ ಶಿಕ್ಷಣವನ್ನು ಬೆಂಗಳೂರಿನ ಜಿಕೆವಿಕೆ, ದೆಹಲಿಯ ಇಂಡಿಯನ್​ ಅಗ್ರಿಕಲ್ಚರಲ್​ ಸಂಶೋಧನಾ ಸಂಸ್ಥೆಯಲ್ಲಿ ಎಂಎಸ್ಸಿ (ಅಗ್ರಿ) ಪದವಿ ಹಾಗೂ ಪಿಎಚ್​ಡಿ ಪದವಿ ಪಡೆದಿದ್ದಾರೆ. ದೆಹಲಿಯಲ್ಲಿಯೇ ಸಿವಿಲ್​ ಸರ್ವೀಸ್​ಗೆ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಐಎಫ್​ಎಸ್​ಗೆ ಓದಲು ಪ್ರಾರಂಭಿಸಿ, 2018 ಹಾಗೂ 2020 ರಲ್ಲಿ ಸಿವಿಲ್​ ಸರ್ವೀಸ್​ ಸಂದರ್ಶನ ಪಡೆದುಕೊಂಡಿದ್ದರೂ ಆಯ್ಕೆಯಾಗಲಿಲ್ಲ. ಕೊನೆಗೆ ಈ ಬಾರಿಯ ಪಟ್ಟಿಯಲ್ಲಿ 82ನೇ ರ‍್ಯಾಂಕ್​ ಪಡೆದು ಐಎಫ್​ಎಸ್​ನಲ್ಲಿ ಆಯ್ಕೆಯಾಗಿದ್ದಾರೆ.


ತಂದೆ ಗಂಗಪ್ಪ, ತಾಯಿ ಲಕ್ಷ್ಮಿನರಸಮ್ಮ, ತಮ್ಮ ಎಂ.ಜಿ.ಮುರಳಿ, ದೊಡ್ಡಪ್ಪ ಜಯರಾಮಪ್ಪ, ಜಯಲಕ್ಷ್ಮಮ್ಮ , ಬೆಂಬಲ ಹಾಗೂ ನನ್ನ ಹಿರಿಯ ಸಂಗಡಿಗರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು. ನಾನು ಪರಿಸರ ರಕ್ಷಣೆ ಮಾಡಬೇಕು ಎಂಬ ಆಸೆಯಿಂದ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇನೆ.

ಎಂ.ಜಿ.ವೆಂಟೇಶ್​, ಐಎಫ್​ಎಸ್​ಗೆ ಆಯ್ಕೆಯಾದವರು.

ನನ್ನ ಅಣ್ಣ ದೆಹಲಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಗ ನನಗೆ ಹರಿಯಾಣದ ಕೆನರಾ ಬ್ಯಾಂಕ್​ನಲ್ಲಿ ಕೆಲಸ ಸಿಕ್ಕಿತು. ಅಣ್ಣನನ್ನು ನೋಡಲು ಹೋಗುತ್ತಿದ್ದೆ, ಅವನು ಗುರಿ ಮುಟ್ಟಲು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದೆ. ನನ್ನ ಅಣ್ಣ ಗುರಿ ಸಾಧಿಸಿದ್ದು ತುಂಬಾ ಸಂತೋಷವಾಗುತ್ತಿದೆ.

ಎಂ.ಜಿ.ಮುರಳಿ, ಕೆನರಾ ಬ್ಯಾಂಕ್​ ಸಹ ವ್ಯವಸ್ಥಾಪಕ, ಮಾಲೂರು

ನನ್ನ ಕಷ್ಟಕ್ಕೆ ಫಲ ಸಿಕ್ಕಿದೆ. ನನ್ನ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಲಿ ಎಂದು ಹಗಲಿರುಳು ಕಷ್ಟಪಟ್ಟಿದ್ದು, ಇಂದು ನನ್ನ ಮಗನಿಗೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ.


ಗಂಗಪ್ಪ, ವೆಂಕಟೇಶ್​ ತಂದೆ, ಮಂಚಿನೀಳ್ಳಕೋಟೆ