ನ್ಯೂಸ್

ಶೌಚಗೃಹ ನಿರ್ಮಿಸಲು ಒತ್ತಾಯಿಸಿ ಪ್ರತಿಭಟನೆ

ಶೌಚಗೃಹಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ತಾಲೂಕಿನ ಬಿ.ಮಟಕೆರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಶುಕ್ರವರ ಪ್ರತಿಭಟನೆ ನಡೆಸಲಾಯಿತು.

ಸರಗೂರು: ತಾಲೂಕಿನ ಬಿ.ಮಟಕೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆದಿವಾಸಿ ಜನಾಂಗದವರಿಗೆ ಶೌಚಗೃಹ ಇಲ್ಲದೆ ನಿತ್ಯ ಪರದಾಡುವಂತಾಗಿದ್ದು, ಕೂಡಲೇ ಶೌಚಗೃಹಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.


ಸರಗೂರು ತಾಲೂಕಿನ ಬಿ.ಮಟಕೆರಿ ಗ್ರಾಮ ಪಂಚಾಯಿತಿಗೆ 40ಕ್ಕಿಂತ ಹೆಚ್ಚು ಗ್ರಾಮಗಳು ಬರುತ್ತವೆ. ಅದರಲ್ಲಿ ಅರ್ಧದಷ್ಟು ಹಾಡಿಗಳು ಇವೆ. ಅದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಡಿ ಜನರಿಂದ ಮತಗಳನ್ನು ಹಾಕಿಸಿಕೊಂಡು ಗೆದ್ದು ಇದೀಗ ಹಾಡಿಯ ಜನರ ಕಷ್ಟ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಯಲುಶೌಚ ಮಾಡದಿರುವಂತೆ ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ. ಆದರೆ ಪಂಚಾಯಿತಿ ವತಿಯಿಂದ ಯಾವುದೇ ಶೌಚಗೃಹಗಳನ್ನು ನಿರ್ಮಿಸದೇ ಇರುವುದರಿಂದ ಗ್ರಾಮಸ್ಥರು ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ ಎಂದು ಅಳಲು ತೋಡಿಕೊಂಡರು.


ಪಂಚಾಯಿತಿಯ ಕಾರ್ಯದರ್ಶಿ ಮಂಜುನಾಥ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ನಂತರ ಪಂಚಾಯಿತಿ ಅಧಿಕಾರಿ ಮಾತನಾಡಿ 15 ದಿನ ಸಮಯ ನೀಡುವಂತೆ ಕೋರಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.


ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜು, ದಸಂಸ (ಅಂಬೇಡ್ಕರ್ ವಾದ) ಕೂಡಗಿ ಗೋವಿಂದರಾಜು, ಕುಮಾರ್, ಚಂದ್ರ, ಸುರೇಶ, ಸಿದ್ದರಾಜು ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.