ನ್ಯೂಸ್

ಶೋಭಾಯಾತ್ರೆ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಚಿತ್ರದುರ್ಗ: ದೇಶದಲ್ಲೇ ಖ್ಯಾತಿ ಪಡೆಯುತ್ತಿರುವ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಹಿಂದು ಮಹಾಗಣಪತಿ ಶೋಭಾಯಾತ್ರೆಯೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಶನಿವಾರ ಜರುಗಿತು.

ರಾಜ್ಯದ ಮೂಲೆ-ಮೂಲೆಗಳಿಂದ, ಕೇರಳ, ಮಹಾರಾಷ್ಟ್ರ, ಆಂಧ್ರ ಸೇರಿ ಹೊರ ರಾಜ್ಯಗಳಿಂದಲೂ ಭಕ್ತರ ದಂಡು ಸಾಗರದಂತೆ ಹರಿದುಬಂದಿತ್ತು. ಮಹಾಗಣಪನ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡು ಪುಳಕಿತರಾದರು.

ಕೇಸರಿಮಯವಾಗಿ ಕಂಗೊಳಿಸಿದ ಕೋಟೆನಗರಿಯಲ್ಲಿ ಹಿಂದು ಧರ್ಮದ ಸಂಘಟನೆಯೊಂದಿಗೆ ಶಕ್ತಿ ಪ್ರದರ್ಶನ, ಒಗ್ಗಟ್ಟಿನ ಮಂತ್ರಕ್ಕೂ ಈ ಗಣೇಶೋತ್ಸವ ಸಾಕ್ಷಿಯಾಯಿತು. ದೇಶ, ದೈವ, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರಭಕ್ತರ ಸ್ಮರಣೆಯೂ ಮಾರ್ಗದುದ್ದಕ್ಕೂ ಮಾರ್ದನಿಸಿತು.

ಮಹಾಗಣಪನ ಶೋಭಾಯಾತ್ರೆಯೂ ಶಕ್ತಿ-ಭಕ್ತಿಯ ಸಂಗಮವಾಗಿ ಇಡೀ ನಗರದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಪಕ್ಷ ಭೇದ ಮರೆತು ಎಲ್ಲರೂ ಮಹೋತ್ಸವಕ್ಕೆ ಸಾಥ್ ನೀಡಿದರು. ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿಯ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.

ಭಕ್ತಸಾಗರದ ನಡುವೆಯೂ ಜಿಲ್ಲಾಸ್ಪತ್ರೆ ಪ್ರವೇಶಿಸಲು 108 ವಾಹನಗಳಿಗೆ ಪೊಲೀಸ್ ಇಲಾಖೆ ಅಗತ್ಯ ವ್ಯವಸ್ಥೆ ಕಲ್ಪಿಸಿತ್ತು. ಗಣಪನ ಮುಂಭಾಗ ತ್ರಿವರ್ಣ, ಕನ್ನಡಾಂಬೆ ಧ್ವಜ ರಾರಾಜಿಸಿತು. 25ಸಾವಿರಕ್ಕೂ ಹೆಚ್ಚು ಯುವತಿಯರು ಯುವಕರನ್ನು ಮೀರಿಸುವಂತೆ ಮಾರ್ಗದುದ್ದಕ್ಕೂ ಹೆಜ್ಜೆ ಹಾಕಿ ಗಮನ ಸೆಳೆದರು.