ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ತಮಿಳುನಾಡಿನವರೇ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ ೧೨೩(೩ಎ) (ಧರ್ಮ, ಜನಾಂಗ, ಜಾತಿ, ಸಮುದಾಯದ ಆಧಾರದ ಮೇಲೆ ಭಾರತದ ವಿವಿಧ ವರ್ಗಗಳ ನಾಗರಿಕರ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸುವುದು ಅಥವಾ ಉತ್ತೇಜಿಸಲು ಪ್ರಯತ್ನಿಸುವುದು ಅಥವಾ ಅಭ್ಯರ್ಥಿ ಅಥವಾ ಅವರ ಏಜೆಂಟ್ ಅಥವಾ ಇತರೆ ವ್ಯಕ್ತಿಯಿಂದ ಒಪ್ಪಿಗೆ ಪಡೆದು ಪ್ರಚಾರ ಮಾಡುವುದು ಅಥವಾ ಉತ್ತೇಜನ ನೀಡುವುದು ಅಥವಾ ಯಾವುದೇ ಅಭ್ಯರ್ಥಿಯ ಚುನಾವಣೆಯ ಮೇಲೆ ಪೂರ್ವಾಗ್ರಹದಿಂದ ಪ್ರಭಾವ ಬೀರುವುದು. ೧೨೫ ( ಜಾತಿ, ಧರ್ಮ, ಜನಾಂಗ, ಸಮುದಾಯದ ದ್ವೇಷ ಭಾವನೆಗಳ ಆಧಾರದ ಮೇಲೆ ಪ್ರಚಾರ ಮಾಡುವುದು ಅಥವಾ ಪ್ರಯತ್ನಿಸುವುದು ಮತ್ತು ೧೨೩ (೩) (ಅಭ್ಯರ್ಥಿ ಅಥವಾ ಅವರ ಏಜೆಂಟ್ ಅಥವಾ ಅಭ್ಯರ್ಥಿಗಳ ಒಪ್ಪಿಗೆಯೊಂದಿಗೆ ಅಥವಾ ಅವರ ಚುನಾವಣಾ ಏಜೆಂಟರ ಸಮ್ಮತಿಯೊಂದಿಗೆ ಯಾವುದೇ ವ್ಯಕ್ತಿಯಿಂದ ಯಾವುದೇ ವ್ಯಕ್ತಿಗೆ ಮತ ಚಲಾಯಿಸಲು ಅಥವಾ ಅವರ ಆಧಾರದ ಮೇಲೆ ಮತ ಚಲಾಯಿಸುವುದನ್ನು ತಡೆಯಲು ಮನವಿ ಹಾಗೂ ಇತರೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರ್ತ್‌ಪೇಟೆಯಲ್ಲಿ ಮೊಬೈಲ್ ಅಂಗಡಿ ಮಾಲೀಕನ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿ ನಾಯಕರು ಇತ್ತೀಚೆಗೆ ಪ್ರತಿಭಟನೆ ನಡೆಸುವ ವೇಳೆ ಮಾತನಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನಲ್ಲಿ ತರಬೇತಿ ಪಡೆದುಕೊಂಡು ಬಂದವರು ಬೆಂಗಳೂರಿನಲ್ಲಿ ಬಾಂಬ್ ಇಡುತ್ತಾರೆ. ದೆಹಲಿಯಿಂದ ಬಂದವನು ಪಾಕಿಸ್ತಾನ್ ಜಿಂದಾಬಾಂದ್ ಎಂದು ಘೋಷಣೆ ಕೂಗುತ್ತಾನೆ. ಕೇರಳದಿಂದ ಬಂದವನು ಆ್ಯಸಿಡ್ ದಾಳಿ ನಡೆಸುತ್ತಾನೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಅಯೋಗ ಗುರುವಾರ ಶೋಭಾ ಕರಂದ್ಲಾಜೆ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ದೂರು ನೀಡಿತ್ತು. ಹೀಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.