ಸತತ ಪ್ರಯತ್ನ ಮಾಡುವುದೇ ಗುರಿ ಸಾಧನೆಗೆ ಸಹಕಾರಿ ಆಗುತ್ತದೆ ಎಂದು ಅಂತಾರಾಷ್ಟ್ರೀಯ ಖೋಖೋ ಆಟಗಾರ್ತಿ ಬಿ. ಚೈತ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ರೇಂಜರ್ಸ್ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅವಿರತ ಪ್ರಯತ್ನ ಇಲ್ಲದೆ ಸಾಧನೆ ಅಸಾಧ್ಯ ಎಂದರು.
ಜೀವನದಲ್ಲಿ ಗುರಿ ಇರಬೇಕು. ಗುರಿ ಇಲ್ಲದೆ ಬದುಕಿಲ್ಲ. ಯಾರೇ ಗುರಿ ತಲುಪಲು ಗುರು ಇರಬೇಕು. ಗುರು ಇಲ್ಲದೆ ಅದು ಕಷ್ಟಸಾಧ್ಯ. ಜತೆಗೆ ಪರಿಶ್ರಮವೂ ಬೇಕು ಎಂದು ಹೇಳಿದರು.
ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆಯಿರಿ. ಅದು ಯಶಸ್ಸಿನ ಕಡೆಗಿನ ಹಾದಿಗೆ ಸುಲಭ ಮಾರ್ಗ. ಓದುವುದರ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಇಲ್ಲವೇ ಕಲೆ ಇಂತಹ ಸಹ ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಲೇಖಕ ಸಂತೋಷ್ ಚೊಕ್ಕಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು. ಹೆಣ್ಣು ಪ್ರಗತಿ ಸಾಧಿಸಿದರೆ ಇಡೀ ಸಮಾಜವೇ ಅಭಿವೃದ್ಧಿ ಹೊಂದಿದಂತೆ ಎಂದರು.
ಖ್ಯಾತ ಗಾಯಕ ಮತ್ತು ಆಕಾಶವಾಣಿ ಕಲಾವಿದ ನಿತಿನ್ ರಾಜಾರಾಂ ಶಾಸ್ತ್ರಿ ಅವರು ತಮ್ಮ ಗಾಯನದ ಮೂಲಕ ರಂಜಿಸಿದರು. ಸಾಹುಕಾರ ಹುಂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್, ನಿರ್ದೇಶಕ ದೊರೆಸ್ವಾಮಿ ನಾಯಕ, ಪ್ರಾಂಶುಪಾಲ ಪ್ರೊ.ಎಂ.ಅಬ್ದುಲ್ ರಹಿಮಾನ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಪಿ. ಕೋಮಲ್, ಖಜಾಂಚಿ ಜಿ.ಎಲ್.ಬಸವರಾಜು, ಎನ್.ಎಸ್.ಎಸ್. ಅಧಿಕಾರಿಗಳಾದ ಭೀಮೇಶ್, ಲತಾರಾಣಿ, ದೈಹಿಕ ಶಿಕ್ಷಣ ನಿರ್ದೇಶಕಿ ಕೆ.ಆರ್.ಪ್ರತಿಮಾ ಇತರರು ಇದ್ದರು.