ಕಡೂರು: ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಡಿ ತಾಲೂಕಿನಲ್ಲಿ ಇದುವರೆಗೂ ಶೇ.91ರಷ್ಟು ಮನೆಗಳ ಸಮೀಕ್ಷೆ ನಡೆಸಿರುವುದು ಶ್ಲಾಘನೀಯ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್.ಶ್ರೀಕಂಠಯ್ಯ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಗೆ ಸೋಮವಾರ ಭೇಟಿ ನೀಡಿ ಸಮೀಕ್ಷೆ ಕಾರ್ಯದ ಪ್ರಗತಿ ಕುರಿತು ತಾಲೂಕು ಅಧಿಕಾರಿಗಳಿಂದ ಅಂಕಿ ಅಂಶಗಳ ಮಾಹಿತಿ ಪಡೆದು ಮಾತನಾಡಿದ ಅವರು, ಈಗಾಗಲೇ ಸಮೀಕ್ಷೆಯನ್ನು ರಾಜ್ಯಾದ್ಯಂತ ಉತ್ತಮವಾಗಿ ನಡೆಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಕಡೂರು ತಾಲೂಕಿನಲ್ಲಿಯೂ ನಿಗದಿಪಡಿಸಿದ 80,161 ಮನೆಗಳ ಪೈಕಿ 72,028 ಮನೆಗಳ ಸಮೀಕ್ಷೆಯನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ. 8,133 ಮನೆಗಳು ಮಾತ್ರ ಸಮೀಕ್ಷೆಗೆ ಉಳಿದುಕೊಂಡಿದೆ. ನಿಗದಿತ ದಿನದೊಳಗೆ ಸಮೀಕ್ಷೆದಾರರು ಪೂರ್ಣಗೊಳಿಸುವ ವಿಶ್ವಾಸವಿದೆ. ತಾಲೂಕಿನ ಅಧಿಕಾರಿಗಳ ತಂಡ ಹಾಗೂ ಗಣತಿದಾರರು ಉತ್ತಮ ತಂಡವಾಗಿ ಕಾರ್ಯನಿರ್ವಹಿಸಿರುವುದು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಗ್ನಿ ಅವರು 213 ಮನೆಗಳ ಸಮೀಕ್ಷೆ ಕಾರ್ಯವನ್ನು ನಡೆಸಿ ಆಯೋಗದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.
ಸಮೀಕ್ಷೆಯಿಂದ ಹೊರಗೆ ಉಳಿದಿರುವ ಮನೆಗಳ ಅಂತಿಮ ಪಟ್ಟಿ ತಯಾರಿಸಿ ಮತ್ತೊಮ್ಮೆ ಸಮೀಕ್ಷೆಗೆ ಒಳಪಡಿಸಲು ಅವಕಾಶ ನೀಡಲಾಗುತ್ತದೆ. ಆದರೂ ಸಮೀಕ್ಷೆಯಲ್ಲಿ ಮಾಹಿತಿ ನಿರಾಕರಿಸಿದ ಮನೆಗಳನ್ನು ಕೈಬಿಡಲಾಗುತ್ತದೆ. ಒಂದು ವೇಳೆ ಸಮೀಕ್ಷೆಯಲ್ಲಿ ಆಕಸ್ಮಿಕ ತಪ್ಪು ಮಾಹಿತಿ ನಮೂದಾಗಿದ್ದರೂ ಆ್ಯಪ್‌ನಲ್ಲಿ ಸರಿಪಡಿಸಲು ಅವಕಾಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಸಿಎಂ ಜಿಲ್ಲಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್, ಬಿಸಿಎಂ ತಾಲೂಕು ಅಧಿಕಾರಿ ಎಸ್.ಎಸ್.ದೇವರಾಜ್, ಬಿಇಒಗಳಾದ ತಿಮ್ಮಯ್ಯ, ಬಿ.ಚೋಪ್ತಾರ್, ಹರೀಶ್ ಅಗ್ನಿ ಮತ್ತಿತರರಿದ್ದರು.