ನ್ಯೂಸ್

ಶೇ.50 ಖಾಸಗಿ ವೈದ್ಯ ಸೀಟಿಗೂ ಸರ್ಕಾರಿ ಶುಲ್ಕ!

ಬೆಂಗಳೂರು: ವೈದ್ಯಕೀಯ ಕೋರ್ಸ್​ಗಳ ಶುಲ್ಕದಿಂದಾಗಿ ಪ್ರವೇಶಕ್ಕೆ ಹಿಂಜರಿಯುವ ವಿದ್ಯಾರ್ಥಿಗಳು ಮುಂದಿನ ವರ್ಷದಿಂದ ಕೊಂಚ ನಿರಾಳರಾಗಬಹುದು. ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿರುವಂತೆ ಶುಲ್ಕ ಪದ್ಧತಿ ಇರಲಿದೆ! ಆಯಾ ಕಾಲೇಜಿನ ಹಾಗೂ ಡೀಮ್ಡ್ ವಿವಿಯ ಶೇ.50 ಸೀಟುಗಳಿಗೆ ಇದು ಅನ್ವಯವಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.

ದೇಶದಲ್ಲಿ ವೈದ್ಯಕೀಯ ಶಿಕ್ಷಣ ನಿಯಂತ್ರಕ ಸಂಸ್ಥೆ ಯಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ನ್ಯಾಷನಲ್ ಮೆಡಿಕಲ್ ಕಮಿಷನ್- ಎನ್​ಎಂಸಿ) ರೂಪಿಸಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಖಾಸಗಿ ಹಾಗೂ ಡೀಮ್ಡ್ ವಿವಿಗಳಲ್ಲಿನ ಶೇ.50 ಸೀಟುಗಳ ಶುಲ್ಕಗಳು ಆಯಾ ರಾಜ್ಯಗಳ ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕಕ್ಕೆ ಸಮಾನವಾಗಿರಬೇಕು. ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ. ಆಯಾ ರಾಜ್ಯದ ಶುಲ್ಕ ನಿಗದಿ ಸಮಿತಿಯು ತನ್ನ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳತಕ್ಕದ್ದು ಎಂದು ಎನ್​ಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳೇ ಎನ್​ಎಂಸಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿರುವ ಖಾಸಗಿ ಹಾಗೂ ಡೀಮ್ಡ್ ವಿವಿಗಳ ಶೇ.50 ಸೀಟುಗಳಿಗೆ ಸರ್ಕಾರಿ ಕಾಲೇಜಿನಷ್ಟೇ ಶುಲ್ಕ ಆಕರವಾಗಬೇಕೆಂದು ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಜತೆಗೆ, ಸರ್ಕಾರಿ ಕೋಟಾದ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಇದರ ಲಾಭ ದೊರೆಯಬೇಕು. ಆದರೆ, ಈ ಪ್ರಮಾಣ ಆಯಾ ಸಂಸ್ಥೆಯ ಮಂಜೂರಾದ ಸೀಟುಗಳ ಪೈಕಿ ಶೇ.50 ಮೀರುವಂತಿಲ್ಲ ಎಂದೂ ಹೇಳಿದೆ.

ಕಡಿಮೆ ಸೀಟುಗಳಿದ್ದರೆ?: ಈ ನಿಯಮ ಶೇ.50 ಸಿಟುಗಳಿಗೆ ಅನ್ವಯಿಸಲಿದೆ. ಒಂದು ವೇಳೆ ಡೀಮ್ಡ್ ವಿವಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಕ್ಕೆ ನೀಡ ಲಾಗಿರುವ ಅಥವಾ ಸರ್ಕಾರದಿಂದ ಹಂಚಿಕೆಯಾಗುವ ಸೀಟುಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆ ಇದ್ದಲ್ಲಿ ಈ ಪೈಕಿ ಇನ್ನುಳಿದ ಖಾಸಗಿ ಕೋಟಾದ ಸೀಟುಗಳಿಗೂ ಸರ್ಕಾರಿ ಶುಲ್ಕವನ್ನೇ ಪಡೆಯತಕ್ಕದ್ದು. ಇದನ್ನು ಮೆರಿಟ್ ಆಧಾರದ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಾನದಂಡವೇನು?: ಖಾಸಗಿ ಕಾಲೇಜು ಹಾಗೂ ಡೀಮ್ಡ್ ವಿವಿಗಳಲ್ಲಿ ಶುಲ್ಕ ನಿಗದಿಗೆ ಯಾವುದೇ ರೂಪದಲ್ಲಿ ಕ್ಯಾಪಿಟೇಷನ್ ಶುಲ್ಕ ವಿಧಿಸುವಂತಿಲ್ಲ ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಶಿಕ್ಷಣ ಕ್ಷೇತ್ರವು ‘ಲಾಭಕ್ಕಾಗಿ ಅಲ್ಲ’ ಎಂಬ ತತ್ವವನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ. ಅನಿಯಂತ್ರಿತ ವೆಚ್ಚ ಹಾಗೂ ಅತಿಯಾದ ಲಾಭದ ಅಂಶಗಳನ್ನು ಶುಲ್ಕ ನಿಗದಿಗೆ ಪರಿಗಣಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.