ನ್ಯೂಸ್

ಶೆಟ್ಟಿಹಳ್ಳಿ ಗ್ರಾಮದಲ್ಲಿ ಆಜನೇಯ ಮೂರ್ತಿ ಉದ್ಟಾಟನೆ

ಹಾಸನ: ಗ್ರಾಮದಲ್ಲಿ ಸುಂದರ ಆಂಜನೇಯ ಸ್ವಾಮಿ ಮೂರ್ತಿ ಪ್ರಾತಿಷ್ಠಾಪನೆ ಮಾಡಲಾಗಿದ್ದು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ಎಲ್ಲರೂ ನೆಮ್ಮದಿ ಬದುಕು ನಡೆಸುವಂತೆ ಒಳಿತು ಮಾಡಲಿ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಎಂ.ಪಟೇಲ್ ಹೇಳಿದರು.

ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಹೆಬ್ಬಾಗಿಲಲ್ಲಿ ಸುಮಾರು 10.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 22 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು, ಧಾರ್ಮಿಕ ಭಕ್ತಿ ಇರುವ ಕಡೆ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಇಂದೊಂದು ಭವ್ಯ ಮೂರ್ತಿಯಾಗಿದ್ದು, ಗ್ರಾಮದ ಹೆಬ್ಬಾಗಿಲಲ್ಲಿ ಆಂಜನೇಯ ಮೂರ್ತಿ ಊರಿನ ಪ್ರವೇಶಕ್ಕೆ ಮೊದಲು ಸ್ಪೂರ್ತಿ ನೀಡುತ್ತದೆ. ಗ್ರಾಮದಲ್ಲಿ ಹಳೆ ದೇವಾಲಯಗಳ ಜೀಣೋದ್ಧಾರ ಮಾಡಬೇಕು. ಇಂತಹ ಕೆಲಸಗಳಿಗೆ ಗ್ರಾಮದಲ್ಲಿ ಆರ್ಥಿಕವಾಗಿ ಸದೃಢರು ಮುಂದಾಗಿರುವುದು ಶ್ಲಾಘನೀಯ ಎಂದರು.

ಗ್ರಾಮದ ಮುಖಂಡ ಶಿವಕುಮಾರ್ ಮಾತನಾಡಿ, ಎಲ್ಲರ ಸಹಕಾರದಿಂದ ಸುಂದರ ಮೂರ್ತಿ ಲೋಕಾರ್ಪಣೆಯಾಗಿದೆ. ಗ್ರಾಮದ ಪುರಾತನ ಹಾಗೂ ಧಾರ್ಮಿಕ ಸ್ಥಳಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ. ಇದು ಗ್ರಾಮಸ್ಥರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಎಲ್ಲರೂ ಶ್ರದ್ಧೆ-ಭಕ್ತಿಯಿಂದ ಮೂರ್ತಿ ನಿರ್ಮಾಣಕ್ಕೆ ಮುಂದಾಗಿದ್ದು ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಕೌಶಿಕ, ಸತೇನಹಳ್ಳಿ, ಗುಡುಗನಹಳ್ಳಿ, ಅಲ್ಲಾನಕಾಫಿ ಕ್ಯೂರಿಂಗ್, ಕಂಚನಹಳ್ಳಿ, ಸಾವಂತನಹಳ್ಳಿ ಗ್ರಾಮಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ಹನುಮನ ಭಕ್ತರು ಜೈ ಭಜರಂಗಿ, ಜೈ ಹನುಮಾನ್ ಘೋಷಣೆಗಳನ್ನು ಕೂಗಿದರು.