ಪರಸ್ಪರ ಸಂತೈಸಿಕೊಳ್ಳುತ್ತಿರುವ ಸಂತ್ರಸ್ತರು 
ನ್ಯೂಸ್

ಶೂಟೌಟ್​ಗೆ ಬೆಚ್ಚಿದ ಅಮೆರಿಕ

ಬಂದೂಕಿನ ಆರ್ಭಟಕ್ಕೆ ಅಮೆರಿಕದಲ್ಲಿ ಮತ್ತೊಮ್ಮೆ ಅಮಾಯಕ ಜೀವಗಳು ಬಲಿಯಾಗಿವೆ. ಟೆಕ್ಸಾಸ್​ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 19 ಮಂದಿ ಮಕ್ಕಳು ಸೇರಿ, 21 ಜನರು ಬಲಿಯಾಗಿದ್ದಾರೆ.

ಶೂಟೌಟ್ ಕರಾಳತನಕ್ಕೆ ಅಮೆರಿಕ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಟೆಕ್ಸಾಸ್​ನ ಉವಾಲ್ಡೆಯ ರಾಬ್ ಪ್ರಾಥಮಿಕ ಶಾಲೆ ಈ ದುರಂತಕ್ಕೆ ಸಾಕ್ಷಿಯಾಗಿದೆ. 18 ವರ್ಷದ ವಿದ್ಯಾರ್ಥಿ ಸಾಲ್ವಾಡೋರ್ ರೈಮಸ್ ಎಂಬಾತ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಬಾಳಿ ಬದುಕಬೇಕಾದ ಮಕ್ಕಳು ಬಲಿಯಾಗಿದ್ದಾರೆ. ದಾಳಿಕೋರ ಸಮೀಪದ ಹೈಸ್ಕೂಲಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಘಟನೆಯಲ್ಲಿ 19 ಜನ ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸೇರಿ 21 ಜನರು ಮೃತಪಟ್ಟಿದ್ದಾರೆ. ಅಲ್ಲದೆ, 13ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಾಲೆಯ ಕೆಲ ಸಿಬ್ಬಂದಿ ಮತ್ತು ಪೊಲೀಸರೂ ಗಾಯಗೊಂಡಿದ್ದು, ಅವರನ್ನು ಸಮೀಪದ ಉವಾಲ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ತಿಳಿಸಿದ್ದಾರೆ. ಶಾಲೆಗೆ ತೆರಳುವ ಮುನ್ನ ಮನೆಯಲ್ಲಿ ಅಜ್ಜಿಯ ಮೇಲೂ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವೃದ್ಧೆಯನ್ನು ಏರ್​ಲಿಫ್ಟ್ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ದಾಳಿಕೋರರನ್ನು ಹತ್ಯೆ ಮಾಡಿದ್ದಾರಾದರೂ, ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. 2012ರಲ್ಲಿ ಕನೆಕ್ವಿಕಟ್​ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಭೀಕರ ದಾಳಿ ಇದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 2012 ಡಿಸೆಂಬರ್ 14ರಂದು 20 ವರ್ಷದ ಯುವಕ ಎಡಮ್ ಲಾಂಜಾ ನ್ಯೂಟೌನ್ ಶಾಲೆಯಲ್ಲಿ ನಡೆಸಿದ ಭೀಕರ ಗುಂಡಿನ ದಾಳಿಗೆ 26 ಜನ ಮೃತಪಟ್ಟಿದ್ದರು. ಈ ಪೈಕಿ 20 ವಿದ್ಯಾರ್ಥಿಗಳು ಮತ್ತು ಆರು ಜನ ಶಿಕ್ಷಕರಿದ್ದರು. ಮನೆಯಲ್ಲಿ ತನ್ನ ತಾಯಿಯನ್ನು ಹತ್ಯೆಗೈದ ಬಳಿಕ ಎಡಮ್ ಶಾಲೆಗೆ ನುಗ್ಗಿ, ಈ ಕೃತ್ಯ ಎಸಗಿದ್ದ.

ಜಾಗೃತಿಯ ಅಗತ್ಯವೂ ಇದೆ: ಸಾಮಾಜಿಕ ಹಾಗೂ ಮನೋವಿಜ್ಞಾನಿಗಳ ಪ್ರಕಾರ, ಗುಂಡಿನ ದಾಳಿ ಪ್ರಕರಣಗಳಿಗೆ ಕಡಿವಾಣ ಹಾಕದಿದ್ದರೆ ಅಶಾಂತಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳು, ಹದಿಹರೆಯದವರು, ಯುವಕ-ಯುವತಿಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಇದಕ್ಕಾಗಿ, ಶಾಲೆ-ಕಾಲೇಜುಗಳಲ್ಲಿಯೇ ಕೌನ್ಸೆಲಿಂಗ್ ಕೇಂದ್ರ ತೆರೆಯುವುದು, ಹಿಂಸೆ ವಿರೋಧಿ ಮನೋಭಾವ ಬೆಳೆಸುವುದು, ಉತ್ತಮ ಹವ್ಯಾಸಗಳನ್ನು ಮೈಗೂಡಿಸಿ ಕೊಳ್ಳಲು ಮನ ಓಲೈಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ನಿರುದ್ಯೋಗಿಗಳು ಹಿಂಸೆಗೆ ತೊಡಗುವಂಥ ಘಟನೆಗಳು ಹೆಚ್ಚುತ್ತಿದ್ದು, ನಿರುದ್ಯೋಗಿಗಳಿ ಗಾಗಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ರೂಪಿಸುವುದು ಅಗತ್ಯ ಎನ್ನುತ್ತಾರೆ.

ಹೆಚ್ಚುತ್ತಲೇ ಇವೆ ಘಟನೆಗಳು: 2022ರ ಮೊದಲ ಆರು ತಿಂಗಳಲ್ಲೇ ಅಮೆರಿಕದ 27 ಶಾಲೆ ಗಳಲ್ಲಿ ಗುಂಡಿನ ದಾಳಿ ನಡೆದಿವೆ. ದೇಶಾದ್ಯಂತ ಇದೇ ಅವಧಿಯಲ್ಲಿ 200ಕ್ಕೂ ಹೆಚ್ಚು ಗುಂಡಿನ ದಾಳಿಯ ಘಟನೆಗಳು ಸಂಭವಿಸಿವೆ. ನ್ಯಾಶನಲ್ ಗನ್ ವೈಲೆನ್ಸ್ ಮೆಮೊರಿಯಲ್​ನ ಅಂಕಿಅಂಶದ ಪ್ರಕಾರ, 2021ರಲ್ಲಿ ಅಮೆರಿಕದಲ್ಲಿ ಗುಂಡಿನ ದಾಳಿಯ 693, 2020ರಲ್ಲಿ 611, 2019ರಲ್ಲಿ 417 ಘಟನೆಗಳು ಸಂಭವಿಸಿವೆ. ಅಂದರೆ, ವರ್ಷದಿಂದ ವರ್ಷಕ್ಕೆ ಶೂಟೌಟ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಂಕಿಸಂಖ್ಯೆಗಳು ಸಾಕ್ಷಿಯಾಗಿವೆ.

ವಿಡಿಯೋ ಗೇಮ್​ಗಳ ಹಾವಳಿ: ಈ ಬಗೆಯ ಮಾರಕ ಗುಂಡಿನ ದಾಳಿಯ ಹಿಂದೆ ಹಿಂಸೆಗೆ ಪ್ರಚೋದಿಸುವ ವಿಡಿಯೋ ಗೇಮ್ಳು ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಬಂದೂಕು ಹಿಂಸೆಯ ವಿಡಿಯೋ ಗೇಮ್ ನೋಡಿರುವ ಅಥವಾ ಆಡಿರುವ ಮಕ್ಕಳ ಪೈಕಿ ಶೇಕಡ 60 ಮಕ್ಕಳು ಕೂಡಲೇ ಗನ್ ಹೊಂದಲು ಬಯಸುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ‘ಹಿಂಸಾತ್ಮಕ ವಿಡಿಯೋ ಗೇಮ್ಳು ಮತ್ತು ದ್ವೇಷದ ಭಾವನೆಯೇ ಶೂಟೌಟ್​ಗಳಿಗೆ ಕಾರಣವಾಗುತ್ತಿವೆ’ ಎಂದು 2019ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೇಳಿದ್ದರು. ಅಮೆರಿಕದಲ್ಲಿ ಶೇಕಡ 90 ಮಕ್ಕಳು ವಿಡಿಯೋ ಗೇಮ್ ಆಡುತ್ತಾರೆ. ಈ ಪೈಕಿ ಬಾಲಕರ ಪ್ರಮಾಣ ಶೇ.99 ಆಗಿದ್ದರೆ ಬಾಲಕಿಯರ ಪ್ರಮಾಣ ಶೇ.94. ಹಿಂಸೆಯ ವಿಡಿಯೋ ಗೇಮ್ಳನ್ನು ಆಡಿದ ಬಳಿಕ ಮಕ್ಕಳಲ್ಲಿ ಗನ್​ಗಳನ್ನು ಹೊಂದುವ, ಟ್ರಿಗರ್ ಅದುಮುವ ಇಚ್ಛೆ ಬಲಗೊಳ್ಳುತ್ತದೆ. ಗನ್ ಪಡೆದುಕೊಂಡ ಮಕ್ಕಳು ಸಣ್ಣಪುಟ್ಟ ಚಿಂತೆಗಳಿಗೆ ಅಥವಾ ಕೆಲವೊಮ್ಮೆ ಮನೆಯಲ್ಲಿನ ವಾತಾವರಣಕ್ಕೆ ರೋಸಿಹೋಗಿ ಗುಂಡಿನ ದಾಳಿಯಂಥ ಕೃತ್ಯಗಳಿಗೆ ಕೈಹಾಕುತ್ತಾರೆ. 2018ರಲ್ಲಿ ಫ್ಲೋರಿಡಾ ಹೈಸ್ಕೂಲ್​ನಲ್ಲಿ ಶೂಟೌಟ್ ಮಾಡಿ 17 ಜನರ ಸಾವಿಗೆ ಕಾರಣನಾದ ನಿಕೊಲಸ್ ಕ್ರೂಜ್ ದಿನಕ್ಕೆ 15 ಗಂಟೆ ಹಿಂಸಾತ್ಮಕ ವಿಡಿಯೋ ಗೇಮ್ ಆಡುತ್ತಿದ್ದ. ಕೆಲವು ಘಟನೆಗಳಿಗೆ ಖಿನ್ನತೆ, ಅತಿಯಾದ ಚಿಂತೆಯೂ ಕಾರಣವಾಗಿವೆ.

ಏನೇನಾಯಿತು?

  • ಮಂಗಳವಾರ ಮಧ್ಯಾಹ್ನ ಏಕಾಏಕಿ ಶಾಲೆ ಆವರಣಕ್ಕೆ ನುಗ್ಗಿದ 18ರ ಯುವಕ ಎರಡು, ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳನ್ನು ಗುರಿಯಾಗಿಸಿ, ಗುಂಡಿನ ದಾಳಿ ನಡೆಸಿದ್ದಾನೆ.
  • ಈ ಘಟನೆಯ ನಂತರ ಅಮೆರಿಕದಲ್ಲಿ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಶೋಕ ಘೋಷಿಸಲಾಗಿದೆ.
  • ದಾಳಿಕೋರನ ಬಳಿ ಒಂದು ಹ್ಯಾಂಡ್​ಗನ್ ಮತ್ತು ಒಂದು ರೈಫಲ್ ಪತ್ತೆಯಾಗಿದೆ.
  • ಘಟನೆ ಬಳಿಕ ಉಳಿದ ಮಕ್ಕಳನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು.
  • ಜಪಾನ್ ಪ್ರವಾಸದಿಂದ ಅಮೆರಿಕಕ್ಕೆ ಮರಳಿರುವ ಅಧ್ಯಕ್ಷ ಜೋ ಬೈಡೆನ್ ಘಟನೆಯ ಬಗ್ಗೆ ವಿಸõತ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ ಹಾಗೂ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾರಕವಾದದ್ದು ಹೇಗೆ?

  • ಗನ್ ಮಾಲೀಕತ್ವ ಹಾಗೂ ಹಿಂಸಾಚಾರದ ನಡುವೆ ನೇರ ಸಂಬಂಧ ಇರುವಂಥದ್ದನ್ನು ಹಲವು ಅಧ್ಯಯನಗಳು ಪತ್ತೆ ಹಚ್ಚಿವೆ. ಜಗತ್ತಿನಲ್ಲೇ ಅತಿಹೆಚ್ಚು ಜನರು ಗನ್ ಮಾಲೀಕತ್ವ ಹೊಂದಿರುವುದು ಅಮೆರಿಕದಲ್ಲೆ ಆಗಿದ್ದು, 100 ಜನರ ಪೈಕಿ 88.8 ಜನರ ಬಳಿ ಬಂದೂಕುಗಳಿರುತ್ತವೆ. ಪರಿಣಾಮ ಜಗತ್ತಿನ ಶೇಕಡ 62ರಷ್ಟು ಶೂಟೌಟ್​ಗಳು ಶಾಲೆ ಹಾಗೂ ಕೆಲಸದ ಸ್ಥಳಗಳಲ್ಲೇ ನಡೆಯತ್ತವೆ. ‘ಸಮಸ್ಯೆ, ಬಿಕ್ಕಟ್ಟು ಶಮನಕ್ಕೆ ಬಂದೂಕು ಒಂದೇ ಪರಿಹಾರ’ ಎಂಬ ಭಾವ ಅನೇಕರಲ್ಲಿದೆ.
  • ಪ್ಯೂ ರಿಸರ್ಚ್ ಸೆಂಟರ್ ದತ್ತಾಂಶಗಳ ಪ್ರಕಾರ, ಗುಂಡಿನ ದಾಳಿಗೆ ಬಲಿಯಾಗುವವರಲ್ಲಿ ಬಿಳಿಯರಿಗಿಂತ ಕರಿಯರೇ ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ. ಬಂದೂಕು ಹೊಂದಿದವರನ್ನು ಗಮನಿಸಿದರೆ, ಕರಿಯರ ಸಂಖ್ಯೆ(19%)ಗಿಂತ ಬಿಳಿಯರ ಸಂಖ್ಯೆ(41%) ಹೆಚ್ಚು.
  • ಆತ್ಮಹತ್ಯೆ, ಸಾಮೂಹಿಕ ಹತ್ಯಾಕಾಂಡದಂಥ ಘಟನೆಗಳಿಗೂ ಬಂದೂಕೇ ಅಸ್ತ್ರವಾಗಿದೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗಿದ್ದು, ಯಾವ ಸಂದರ್ಭದಲ್ಲಿ ಎಲ್ಲಿ ಗುಂಡಿನ ದಾಳಿ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಾಗ ದಂಥ ಪರಿಸ್ಥಿತಿ ಉದ್ಭವಿಸಿದೆ. ಶಾಲೆಗಳಲ್ಲಿ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳು ಕೈಗೊಂಡರೂ ಗುಂಡಿನ ದಾಳಿಗಳು ನಿಲ್ಲುತ್ತಿಲ್ಲ. ತೀರ ಕ್ಷುಲ್ಲಕ ಕಾರಣಗಳಿಗಾಗಿ ಮಕ್ಕಳು ಶಿಕ್ಷಕರನ್ನು, ಸಹಪಾಠಿಗಳನ್ನು ಗುಂಡಿನ ದಾಳಿ ಮೂಲಕ ಹತ್ಯೆಗೈಯ್ಯುವ ಘಟನೆಗಳು ಮರುಕಳಿಸುತ್ತಿವೆ. ಕೆಲ ಬಿಗಿಕ್ರಮಗಳನ್ನು ಅನುಸರಿಸಿದರೆ ಗುಂಡಿನ ದಾಳಿಗಳಲ್ಲಿ 1/3ರಷ್ಟು ಪ್ರಕರಣಗಳನ್ನು ತಡೆಯಲು ಸಾಧ್ಯ ಎನ್ನುವ ರಕ್ಷಣಾ ವಿಶ್ಲೇಷಕರು ಇದರಿಂದ ವರ್ಷಕ್ಕೆ ಕನಿಷ್ಠ 10 ಸಾವಿರ ಜನರ ಪ್ರಾಣ ಉಳಿಸಬಹದು ಎಂದು ಅಭಿಪ್ರಾಯಪಡುತ್ತಾರೆ.
  • ಅಮೆರಿಕದ ನ್ಯಾಷನಲ್ ರೈಫಲ್ ಅಸೋಸಿಯೇಷನ್ (ಘಚಠಿಜಿಟ್ಞಚ್ಝ ್ಕfಛಿ ಅಠಠಟ್ಚಜಿಚಠಿಜಿಟ್ಞ) ವಿರುದ್ಧವೂ ಆಕ್ಷೇಪ, ಟೀಕೆಗಳು ಕೇಳಿಬರುತ್ತಿವೆ. ಕಾರಣ, ಎನ್​ಆರ್​ಎ ಬೇಕಾಬಿಟ್ಟಿ ಗನ್ ಪರವಾನಿಗೆ ನೀಡುತ್ತಿದ್ದು, ವ್ಯಕ್ತಿಗಳ ಪೂರ್ವಾಪರವನ್ನು ಪರಿಶೀಲಿಸುತ್ತಿಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿರುವ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಗನ್ ಲೈಸೆನ್ಸ್ ಪಡೆದವರ ಪೈಕಿ ಶೇಕಡ 40ರಷ್ಟು ಜನರ ಹಿನ್ನೆಲೆಯನ್ನು ಪರಿಶೀಲಿಸಲಾಗಿಲ್ಲ. ಇದರಿಂದ ಅಪಾಯಕಾರಿ ವ್ಯಕ್ತಿಗಳ ಕೈಗೆ ಬಂದೂಕು ಸೇರುತ್ತಿವೆ. ಈ ಹಿಂದೆಯೂ ಈ ಬಗ್ಗೆ ಎನ್​ಐಎ ಗಮನಕ್ಕೆ ತರಲಾದರೂ, ಹೇಳಿಕೊಳ್ಳುವಂಥ ಪ್ರಯೋಜನವಾಗಿಲ್ಲ. ಶಸ್ತ್ರಾಸ್ತ್ರಗಳು ಸುಲಭ ವಾಗಿ ಸಿಗುವವರೆಗೂ ಇಂಥ ಗುಂಡಿನ ದಾಳಿ ತಡೆಯುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಎನ್​ಆರ್​ಎ ಮೇಲೆ ಒತ್ತಡ ತರಲು ಕೆಲ ಸಂಘಟನೆಗಳು ಅಭಿಪ್ರಾಯಸಂಗ್ರಹಕ್ಕೂ ಮುಂದಾಗಿವೆ.
  • ಫೆಡರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಶನ್ (ಎಫ್​ಡಿಐ) ಪ್ರಕಾರ 2022ರಲ್ಲಿ 27 ಶಾಲೆಗಳಲ್ಲಿ ಶೂಟೌಟ್ ನಡೆದಿದ್ದು, 140 ಜನರು ಪ್ರಾಣ ಕಳೆದುಕೊಂಡಿದ್ದಾರೆ.