ಶುಂಠಿಗೆ ಅಧಿಕ ಪೆಚ್ಚು ತೆಗೆಯುವುದನ್ನು ನಿಲ್ಲಿಸಬೇಕು ಎಂದು ಸೊರಬ ತಾಲೂಕಿನ ಶುಂಠಿ ಬೆಳೆಗಾರರು ಮತ್ತು ರೈತ ಸಂಘದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಬಸವಂತಪ್ಪ ಹಿರೆಮಾಗಡಿ, ನಾಗರಾಜ್ ಚಿಕಸವಿ, ಹೇಮಚಂದ್ರ ಶಾಂತಗೇರಿ, ಉಮೇಶ್ ಪಾಟೀಲ್, ಹಾಲೇಶಪ್ಪ ಗೌಡ್, ಶಿವಣ್ಣ ಇತರರಿದ್ದರು. 
ನ್ಯೂಸ್

ಶುಂಠಿಗೆ ಅಧಿಕ ಪೆಚ್ ತೆಗೆಯುವುದನ್ನು ನಿಲ್ಲಿಸಿ

ಸೊರಬ: ಶುಂಠಿಗೆ ಅಧಿಕ ಪೆಚ್ ತೆಗೆಯುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಶುಂಠಿ ಬೆಳೆಗಾರರು ಮತ್ತು ರೈತ ಸಂಘದಿಂದ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದರು.

ಶುಂಠಿ ಬೆಳೆಗಾರ ಮಾಲತೇಶ್ ಕೊಡಕಣಿ ಮಾತನಾಡಿ, ಈ ಹಿಂದೆ ವಾಷಿಂಗ್ ಪಾಯಿಂಟ್‌ನಲ್ಲಿ ವಾಷಿಂಗ್ ಆದ ಶುಂಠಿಗೆ ಯಾವುದೇ ಪೆಚ್ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಕರ್ನಾಟಕ ರಾಜ್ಯ ಹಸಿ ಶುಂಠಿ ವರ್ತಕರ ಸಂಘ ಎಂದು ಮಾಡಿಕೊಂಡು ಖರೀದಿದಾರರು ವಾಷಿಂಗ್ ಪಾಯಿಂಟ್‌ನಲ್ಲಿ ಆದ ಶುಂಠಿಗೆ ಹೆಚ್ಚುವರಿಯಾಗಿ ಪ್ರತಿ 60 ಕೆಜಿ ಬ್ಯಾಗ್‌ಗೆ 2,5 ಪೆಚ್ ತಗೆದುಕೊಂಡು ಖರೀದಿಸುತ್ತಾರೆ. ಇದರಿಂದ ಶುಂಠಿ ಬೆಳೆಯುವ ಸಣ್ಣ ರೈತರಿಗೆ ಸೇರಿದಂತೆ ಎಲ್ಲ ರೈತರಿಗೆ ಅನ್ಯಾಯವಾಗುತ್ತದೆ. ವಾಷಿಂಗ್ ಪಾಯಿಂಟ್‌ನಲ್ಲಿ ಕಂಪ್ಯೂಟರ್ ಮಾಪಕ ಇಲ್ಲದಿರುವುದು ಹಾಗೂ ಜಮೀನಿನಲ್ಲಿ ಖರೀದಿ ವೇಳೆ ಒಂದು ದರ, ವಾಷಿಂಗ್ ಸಮಯದಲ್ಲಿ ಒಂದು ದರ ನಿಗದಿಪಡಿಸಿ ಬೆಲೆಯಲ್ಲಿ ವಂಚಿಸುತ್ತಿದ್ದಾರೆ. ಖರೀದಿಸಿದ ಶುಂಠಿ ಬೆಳೆಗೆ ಹಣ ನೀಡಲು ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ರೀತಿ ಅನ್ಯಾಯ ಮುಂದುವರಿದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಮಂಜುಳಾ ಹೆಗಡಾಳ್ ಮನವಿ ಸ್ವೀಕರಿಸಿ ಮಾತನಾಡಿ, ಶುಂಠಿ ಬೆಳೆಗಾರರಿಗೆ ಖರೀದಿಯಲ್ಲಿ ಆಗುವ ನಷ್ಟ ಮತ್ತು ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರುವ ಮೂಲಕ ಖರೀದಿದಾರರ ಸಭೆ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಬಸವಂತಪ್ಪ ಹಿರೆಮಾಗಡಿ, ತಾಪಂ ಮಾಜಿ ಸದಸ್ಯ ನಾಗರಾಜ್ ಚಿಕಸವಿ, ಹೇಮಚಂದ್ರ ಶಾಂತಗೇರಿ, ರೈತ ಸಂಘದ ಉಮೇಶ್ ಪಾಟೀಲ್, ಹಾಲೇಶಪ್ಪ ಗೌಡ್, ಶಿವಣ್ಣ ಹುಣಸವಳ್ಳಿ, ನಿರಂಜನ್ ದೇವತಿಕೊಪ್ಪ, ಮರಿಯಪ್ಪ ತವನಂದಿ, ಗುರುಮೂರ್ತಿ ಓಟೂರು, ರೇವಣಪ್ಪ, ಸುರೇಂದ್ರ ಮಾವಲಿ ಹಾಗೂ ಸಾಗರ-ಶಿಕಾರಿಪುರ ಶುಂಠಿ ಸೇರಿದಂತೆ ನೂರಾರು ಶುಂಠಿ ಬೆಳೆಗಾರರು ಪಾಲ್ಗೊಂಡಿದ್ದರು.