ಬೀರೂರು: ಪ್ರತಿ ವ್ಯಕ್ತಿಗೆ ಕುಡಿಯುವ ನೀರನ್ನು ಒದಗಿಸುವ ಅಮೃತ್ 2.0 ಯೋಜನೆಯಲ್ಲಿ ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ ನೀರು ಪೂರೈಕೆಗೆ ಮಂಜೂರಾತಿ ದೊರೆತಿದ್ದು ಕಾಮಗಾರಿ ಆರಂಭವಾಗಬೇಕಿದೆ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.
ಬುಧವಾರ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಅಗತ್ಯವಿರುವ ಕುಡಿಯುವ ನೀರು, ಬೀದಿದೀಪ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸದಸ್ಯರ ಸಹಮತದೊಂದಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ 135 ಲೀ. ನೀರು ಪೂರೈಸುವ ಉದ್ದೇಶದ ಯೋಜನೆ ಇದಾಗಿದ್ದು 19.75 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತ ಅನುಷ್ಠಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.
ಯೋಜನೆ ಕುರಿತು ಮಾಹಿತಿ ನೀಡಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಆನಂದ್, ಇದೇ ಯೋಜನೆಯ ಅಡಿ ಮಾರ್ಗದ ಕ್ಯಾಂಪ್ ಬಡಾವಣೆಯಲ್ಲಿ 10 ಲಕ್ಷ ಲೀ. ಸಾಮರ್ಥ್ಯದ ಜಲ ಸಂಗ್ರಹಣಾಗಾರ ನಿರ್ಮಾಣವಾಗುತ್ತಿದೆ. ಈ ಯೋಜನೆಯಲ್ಲಿ ಸಂಪರ್ಕ ಪಡೆಯುವವರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಪಟ್ಟಣದಾದ್ಯಂತ 39.80 ಕಿ.ಮೀ. ವಿತರಣಾ ಜಾಲ ಸ್ಥಾಪಿಸಿ 2252 ಮೀಟರ್ ಸಹಿತ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಡಿ.ಎಂ.ಎ1 ಮತ್ತು 3ರಲ್ಲಿ 45.97 ಕಿ.ಮೀ. ವಿತರಣಾ ಜಾಲ ಸ್ಥಾಪಿಸಿ 3678 ಮೀಟರ್ ಸಹಿತ ಗೃಹಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗುವುದು. ಮೊದಲ ಹಂತದ ಕಾಮಗಾರಿಗೆ 14.03 ಕೋಟಿ ರೂ. ವೆಚ್ಚವಾಗಲಿದ್ದು ಕೇಂದ್ರ ಸರ್ಕಾರವು ಶೇ.50, ರಾಜ್ಯ ಸರ್ಕಾರ ಶೇ.40 ಮತ್ತು ಸ್ಥಳೀಯ ಸಂಸ್ಥೆ ಶೇ.10 ಅನುದಾನ ಒದಗಿಸಲಿದೆ ಎಂದು ವಿವರಿಸಿದರು.
ಪಟ್ಟಣದಲ್ಲಿ ಸಿಸಿಎಂಎಸ್ ಯೋಜನೆಯಡಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು ಅಗತ್ಯವಾಗಿ ದೀಪಗಳು ಇರಬೇಕಾದ ಕಡೆಗಳಲ್ಲಿ ಅಳವಡಿಸಿಲ್ಲ. ಕೆಲವು ಕಡೆಗಳಲ್ಲಿ ಕಡಿಮೆ ವ್ಯಾಟ್‌ನ ದೀಪಗಳನ್ನು ಅಳವಡಿಸಿದ್ದಾರೆ. ಬಹಳಷ್ಟು ಹೈಮಾಸ್ಟ್ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಸದಸ್ಯ ಬಿ.ಆರ್.ರವಿಕುಮಾರ್ ಮತ್ತು ಜ್ಯೋತಿ ಅವರು ಗುತ್ತಿಗೆದಾರರ ಪ್ರತಿನಿಧಿ ಸಮಾಧಾನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಮಾಧಾನ್ ಮಾತನಾಡಿ, ಬೀರೂರಿನಲ್ಲಿ 1512 ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಸೂಚಿಸಲಾಗಿತ್ತು. ಆದರೆ ನಾನು ಸೂಚಿಸಿದ್ದಕ್ಕಿಂತ ಹೆಚ್ಚು ದೀಪಗಳನ್ನು ಅಳವಡಿಸಲಾಗಿದೆ. ಕಂಬಗಳು ಖಾಲಿ ಇದ್ದಲ್ಲಿ ಮಂಜೂರಾತಿ ಪಡೆದು ಅಳವಡಿಸಬೇಕು ಎಂದು ತಿಳಿಸಿದರು.
15ನೇ ಹಣಕಾಸು ಯೋಜನೆಯ 45 ಲಕ್ಷ ರೂ. ಅನುದಾನವನ್ನು ಬಳ್ಳಾರಿ ಕ್ಯಾಂಪ್ ಹಿರಿಯಂಗಳ ರಸ್ತೆ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಖ್ಯಾಧಿಕಾರಿ ನನ್ನ ಗಮನಕ್ಕೆ ಬಾರದೆ ರಾತ್ರೋರಾತ್ರಿ ಟೆಂಡರ್ ಕರೆದು ಕಾರ್ಯಾದೇಶ ಕೊಡಲು ಮುಂದಾಗಿದ್ದರು ಎಂದು ಪುರಸಭೆ ಅಧ್ಯಕ್ಷೆ ವನಿತಾ ಆರೋಪಿಸಿದರು. ಪಟ್ಟಣದ ಹಲವು ಆಶ್ರಯ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿದ್ದು ಅಂತಹ ಬಡಾವಣೆಗಳ ಅಭಿವೃದ್ಧಿಗೆ ಈ ಹಣ ಹಂಚಿಕೆ ಮಾಡಬಹುದಿತ್ತು. ನನ್ನ ಗಮನಕ್ಕೆ ತರದೆ ಕಾರ್ಯಾದೇಶಗಳನ್ನು ಹೊರಡಿಸಲು ಮುಂದಾದರೆ ಪರಿಣಾಮ ಎದುರಿಸಲು ಅಧಿಕಾರಿಗಳು ಸಿದ್ಧರಿರಬೇಕು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಮೀನಾಕ್ಷಮ್ಮ, ಬಿ.ಆರ್.ಮೋಹನ್‌ಕುಮಾರ್, ಮಾನಿಕ್ ಬಾಷಾ, ಜಿ.ಲಕ್ಷ್ಮಣ್, ಬಿ.ಆರ್.ರವಿಕುಮಾರ್, ಸಹನಾ, ಗಂಗಾಧರ್, ಬಿ.ಕೆ.ಶಶಿಧರ, ಭಾಗ್ಯಲಕ್ಷ್ಮೀ, ರವಿಕಾಂತ್ ರಾಥೋಡ್, ನಂದಿನಿ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.