ಬಸವಕಲ್ಯಾಣ: ಶಿವಯೋಗ ಸಾಧಕರಿಗೆ ವಿಶೇಷ ತರಬೇತಿ ನೀಡಲು ಕಾರ್ಯಯೋಜನೆ ಹಾಕಿಕೊಂಡಿರುವುದಾಗಿ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.
ನೂತನ ಅನುಭವ ಮಂಟಪ ಹತ್ತಿರದ ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನದ ಅನುಭವ ಮಂಟಪ ಸಂಸತ್ ೭ನೇ ಅಧಿವೇಶನ ಶುಕ್ರವಾರ ಉದ್ಘಾಟಿಸಿ ಮೊದಲನೇ ಗೋಷ್ಠಿಯಲ್ಲಿ ಮಾತನಾಡಿ, ಶರಣರು ಮಠ ಸಂಸ್ಕೃತಿ, ಜಗದ್ಗುರುಗಳು ಪದವಿ ಹುಟ್ಟು ಹಾಕಿಲ್ಲ. ಶರಣರದು ಮಹಾಮನೆ ಕಲ್ಪನೆ. ಮಹಾಮನೆ ಎಂಬುದು ವಿಶಾಲವಾಗಿತ್ತು, ಅದರೊಳಗೆ ಅನುಭವ ಮಂಟಪ ಚಿಂತನೆ ನಡೆಯುತ್ತಿತ್ತು. ಇಂದು ಮಹಾಮನೆ ಸಂಸ್ಕೃತಿ ಬೆಳೆಯಬೇಕಿದೆ ಎಂದು ಸದಾಶಯ ವ್ಯಕ್ತಪಡಿಸಿದರು.
ಲಿಂಗಾಂಗ ಯೋಗವೆಂದರೆ ಕೇವಲ ಆಧ್ಯಾತ್ಮಿಕ ಸಾಧನೆಗೆ ಸೀಮಿತವಲ್ಲ. ಇದು ಜೀವನ ಪರಿವರ್ತನೆ ಶಕ್ತಿ ಹೊಂದಿರುವ ಪ್ರಾತ್ಯಕ್ಷಿಕ ಯೋಗ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಾಧಿಸಿದ ಲಿಂಗಾಂಗ ಯೋಗ ವಿಶ್ವದಲ್ಲೇ ಸರ್ವಶ್ರೇಷ್ಠ. ಶರಣರು ವಚನ ಸಾಹಿತ್ಯದಲ್ಲಿ ಬೋಧಿಸಿದ ಷಟಸ್ಥಲ ಸಾಮರಸ್ಯಕ್ಕೆ ಭದ್ರ ಬುನಾದಿಯಾಗಿದೆ. ಇದರಲ್ಲಿ ವಿಜ್ಞಾನವೂ ಅಡಗಿದೆ. ಪ್ರತಿಯೊಬ್ಬ ಸಾಧಕ ಶಿವಯೋಗ ಮಾರ್ಗ ಅನುಸರಿಸಿದರೆ ಮಾನಸಿಕ ಸ್ವಾಸ್ಥ್ಯಕಾಪಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಂದು ಮಾನವನಿಗೆ ಶಾಂತಿ, ಸಮಾನತೆ ಮತ್ತು ನೈತಿಕದ ಅವಶ್ಯಕತೆ ಇದೆ. ಶರಣರ ಲಿಂಗಯೋಗವೇ ಅದಕ್ಕೆ ಮೂಲ ಪರಿಹಾರ ಎಂದು ಪ್ರತಿಪಾದಿಸಿದರು.
ಬೆಂಗಳೂರಿನ ಭಾರತಿ ಕೆಂಪಯ್ಯ ಅನುಭಾವ ನೀಡಿ, ಲಿಂಗಾಂಗ ಯೋಗ ಸಾಧನೆಯಿಂದ ಶಾರೀರಿಕ ಸ್ವಾಸ್ಥ್ಯ, ಮಾನಸಿಕ ಸಂತೃಪ್ತಿ ಜತೆಗೆ ಆತ್ಮಾನಂದ ಉಂಟಾಗುತ್ತದೆ. ಸಾಮರಸ್ಯ ಸಾಧಿಸುವ ಮೂಲಕ ಪ್ರತಿಯೊಬ್ಬರಲ್ಲಿ ಶಿವಭಾವ ಕಾಣುವುದೇ ಲಿಂಗಾಂಗ ಯೋಗ ಸಾಧನೆ ಎಂದು ನುಡಿದರು.
ಪೂಜ್ಯ ಸತ್ಯದೇವಿ ಮಾತಾಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಗದಗನ ರೇಣುಕಾ ಕರಿಗೌಡರ, ಶ್ರೀ ಗಂಗಾಧರ ದೇವರು, ಶ್ರೀ ಬಸವ ದೇವರು, ಕರ್ನಾಟಕ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮೀಜಿ, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ಓಂಪ್ರಕಾಶ ರೊಟ್ಟೆ, ರಘುನಾಥರಾವ ಇತರರಿದ್ದರು.
ಇಷ್ಟಲಿಂಗ ಸಾಧನೆಯಿಂದ ದೇಹ, ಪ್ರಾಣಲಿಂಗ ಸಾಧನೆಯಿಂದ ಮನಸ್ಸು ಶುದ್ಧಿಯಾಗುತ್ತದೆ. ಭಾವಲಿಂಗ ಸಾಧನೆಯಿಂದ ಆತ್ಮಶುದ್ಧಿಯಾಗಿ ಸಾಧಕನ ಇಡೀ ದೇಹ ಸರ್ವಾಂಗ ಲಿಂಗಮಯವಾಗಲಿದೆ.
| ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಅಧ್ಯಕ್ಷರು, ಬಸವ ಮಹಾಮನೆ ಟ್ರಸ್ಟ್
ಅನುಭವ ಮಂಟಪದ ಆಶಯ ಸಂಸ್ಕಾರ, ಸಹೋದರತೆ, ಸಮಾನತೆ, ಸಂಘಟನೆಯಿಂದ ಕೂಡಿತ್ತು. ಬಸವಣ್ಣನವರು ಒಬ್ಬ ಮನಃಶಾಸ್ತ್ರೀಯ ಗುಣ ಹೊಂದಿದ್ದರಿಂದಲೇ ಸರ್ವರನ್ನು ತನ್ನತ್ತ ಸೆಳೆದು ಸಮುದಾಯಿಕ ಲಿಂಗಯೋಗ ಸಾಧನೆ ಮಾಡಿಸಿದರು. ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಶ್ರೇಷ್ಠ ಲಿಂಗಾನುಭಾವಿಗಳಾಗಿದ್ದು, ಅವರ ಜ್ಞಾನಾನುಭವವನ್ನು ಸಾಧಕರು ಸದುಪಯೋಗ ಪಡೆದುಕೊಳ್ಳಬೇಕು.
| ಶ್ರೀ ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥವಾಡಿ