ಶಿವಮೊಗ್ಗ: ನಗರದಲ್ಲಿ ಶನಿವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ನಿದ್ರೆಗೆ ಜಾರಿದ್ದ ಜನರಿಗೆ ಮಳೆ ಆತಂಕ ಸೃಷ್ಟಿಸಿತ್ತು.
ಅಣ್ಣಾನಗರ, ಶ್ರೀರಾಮನಗರ, ಮಿಳ್ಳಘಟ್ಟ, ಗೋಪಾಲಗೌಡ ಬಡಾವಣೆ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಬೆಳಗಿನ ಜಾವ 3ರಿಂದ ಒಂದೂವರೆ ಗಂಟೆ ಗುಡುಗು ಮಿಂಚು ಸಹಿತ ಎಡಬಿಡದೆ ಸುರಿದ ಮಳೆಗೆ ರಾಜಕಾಲುವೆ, ಚರಂಡಿಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿತ್ತು.
ಹಲವು ರಸ್ತೆಗಳ ಮೇಲೆಯೇ ಭಾರಿ ಪ್ರಮಾಣದ ಮಳೆ ನೀರು ಹರಿದು ಹೋಗುತ್ತಿತ್ತು. ಕಮಲಾ ನೆಹರು ಮಹಿಳಾ ಕಾಲೇಜಿನ ಹಿಂಭಾಗದ ರಾಜಕಾಲುವೆ ಬ್ಲಾಕ್ ಆಗಿ ಮಳೆ ನೀರು ಕಾಲೇಜಿನ ಆವರಣದೊಳಗೆ ನುಗ್ಗಿ ರಾದ್ದಾಂತ ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಟಿ ಪರಿಶೀಲಿಸಿದರು. ಮಹಾನಗರ ಪಾಲಿಕೆ ಆಡಳಿತದ ನಿರ್ಲಕ್ಷ್ಯ ಮತ್ತು ಸ್ಮಾರ್ಟ್‌ಸಿಟಿ ಅವೈಜ್ಞಾನಿಕ ಕಾಮಗಾರಿಗೆ ನಾಗರಿಕರು ಹಿಡಿಶಾಪ ಹಾಕಿದರು.
ಸಾಗರ ರಸ್ತೆಯ ಶ್ರೀರಾಮನಗರದಲ್ಲೂ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ಹಲವು ವಸ್ತುಗಳು ಹಾನಿಗೀಡಾಗಿವೆ. ಭಾರಿ ಮಳೆಯಿಂದ ಒಳಚರಂಡಿ ನೀರು ಶೌಚಗೃಹ ಮೂಲಕ ಮನೆಗೆ ನುಗ್ಗಿದೆ. ಮನೆಯಲ್ಲಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ದುರ್ವಾಸನೆ ಶುರುವಾಗಿದೆ. ಮನೆಯಲ್ಲಿ ಮಲಗಿದ್ದವರು ದುರ್ವಾಸನೆ ತಡೆಯಲಾಗಿದೆ ಸುರಿಯುವ ಮಳೆಯಲ್ಲಿ ಮನೆಯಿಂದ ಹೊರಗೆ ನಿಂತಿದ್ದರು. ಮಹಾನಗರ ಪಾಲಿಕೆಯ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದರ ಪರಿಣಾಮ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.