ಶಿವಮೊಗ್ಗ: ಎಲ್ಲ ಆತಂಕಗಳನ್ನು ದೂರ ಮಾಡಿ ಹಿಂದು ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಶುಕ್ರವಾರ ನಿರ್ವಿಘ್ನವಾಗಿ ನೆರವೇರಿತು. ತಡರಾತ್ರಿ ವೇಳೆಗೆ ಭಕ್ತರ ಹರ್ಷೋದ್ಘಾರದ ನಡುವೆ ತುಂಗಾನದಿಯಲ್ಲಿ ವ್ನಿೇಶ್ವರನ ಜಲಸ್ತಂಭನವಾಯಿತು. ಗಣೇಶನ ವಿಸರ್ಜನೆ ಶಾಂತಿಯುತವಾಗಿ ನೆರವೇರುತ್ತಿದ್ದಂತೆ ನಂಬಿದವರ ಪಾಲಿನ ಕಲ್ಪತರು ಗಜಮುಖನಿಗೆ ನೂರೊಂದು ನಮಸ್ಕಾರ ಹೇಳಿ ಎಲ್ಲರೂ ಅಲ್ಲಿಂದ ನಿರ್ಗಮಿಸಿದರು.
ಕರೊನಾ ಕಾರಣದಿಂದ ಸತತ ಎರಡು ವರ್ಷ ಅತ್ಯಂತ ಸರಳವಾಗಿ ನಡೆದಿದ್ದ ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಈ ವರ್ಷ ವೈಭವದಿಂದ ನೆರವೇರಿತು. ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿ ಮೆರವಣಿಗೆಯು ರಾಜಬೀದಿಗಳಲ್ಲಿ ಸಂಚರಿಸಿ ಗಣೇಶ ಮೂರ್ತಿ ರಾತ್ರಿ ತುಂಗಾನದಿಯ ಭೀಮನ ಮಡುವು ಸೇರಿತು.
ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದು ಸಂಘಟನಾ ಮಹಾಮಂಡಳಿ ಪ್ರತಿಷ್ಠಾಪಿಸಿದ್ದ 78ನೇ ವರ್ಷದ ಹಿಂದು ಮಹಾಸಭಾ ಗಣೇಶ ಮೂರ್ತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವ ನಿರೀಕ್ಷೆಯಂತೆಯೇ ಶುಕ್ರವಾರ ಬೆಳಗ್ಗೆ ಆರಂಭಗೊಂಡು ತಡರಾತ್ರಿ ಕೋರ್ಪಲಯ್ಯನ ಛತ್ರದ ಬಳಿಯ ತುಂಗೆಯಲ್ಲಿ ವಿಸರ್ಜನೆಗೊಂಡಿತು. ಯುವಕರ ಸಂಭ್ರಮ, ಕಲಾತಂಡಗಳ ಸಡಗರ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು.
ರಾಜಬೀದಿ ಉತ್ಸವ ಆರಂಭಕ್ಕೆ ಮುನ್ನ ಸಂಪ್ರದಾಯ, ವಿಧಿ-ವಿಧಾನಗಳ ಮೂಲಕ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹರಿಗೆಯ ಕೆ.ಕೆ.ಗೌಡ ಕುಟುಂಬದವರು 75 ಕೆಜಿಯ ಬೃಹದಾಕಾರದ ಸೇಬಿನ ಹಾರ ಸಮರ್ಪಿಸಿದರು. ಬೃಹತ್ ಗುಲಾಬಿ ಮಾಲೆ ಸೇರಿದಂತೆ ಕೇಸರಿ ಅಲಂಕಾರ ಸಮಿತಿಯಿಂದ ಸಿಂಗಾರಗೊಂಡ ಟ್ರಾೃಕ್ಟರ್‌ನಲ್ಲಿ ವಿರಾಜಮಾನಗೊಂಡಿದ್ದ ಗಣೇಶಮೂರ್ತಿ ಉತ್ಸವವನ್ನು ಶಿವಮೊಗ್ಗ ನಗರ ಅಷ್ಟೇ ಅಲ್ಲ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನ ಕಣ್ತುಂಬಿಕೊಂಡರು. ಮಹಾಮಂಡಳಿ ಅಧ್ಯಕ್ಷ ಎಂ.ಕೆ.ಸುರೇಶ್‌ಕುಮಾರ್ ನೇತೃತ್ವದಲ್ಲಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ತುಂಗಾನದಿಯ ಭೀಮನ ಮಡುವಿನಲ್ಲಿ ಹರ್ಷೋದ್ಗಾರಗಳೊಂದಿಗೆ ವಿಸರ್ಜಿಸಲಾಯಿತು.
ಸಾವರ್ಕರ್ ಪ್ರತಿಮೆ ಕೇಂದ್ರಬಿಂದು: ಕಳೆದೊಂದು ವಾರದಿಂದ ಹಿಂದು ಕೇಸರಿ ಅಲಂಕಾರ ಸಮಿತಿ ಪದಾಧಿಕಾರಿಗಳು ಹಗಲಿರುಳು ಶ್ರಮಿಸಿದ ಪರಿಣಾಮ ಇಡೀ ನಗರವೇ ಕೇಸರಿಮಯಗೊಂಡಿತ್ತು. ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಕೇಸರಿ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‌ಗಳು ರಾರಾಜಿಸಿದವು. ನೆಹರು ರಸ್ತೆಯ ರಸ್ತೆ ವಿಭಜಕಗಳ ಮಧ್ಯದಲ್ಲಿ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳನ್ನು ಹಾಕಲಾಗಿತ್ತು. ಅದರಲ್ಲಿ ವೀರ ಸಾವರ್ಕರ್ ಭಾವಚಿತ್ರಗಳದ್ದೇ ಸಿಂಹಪಾಲು. ನೆಹರು ರಸ್ತೆಗೆ ಸಾವರ್ಕರ್ ಪ್ರತಿಮೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ನೆಹರು ರಸ್ತೆಗೆ ಹೊಂದಿಕೊಂಡಂತೆ ಸಾವರ್ಕರ್ ಮಹಾದ್ವಾರವೇ ನಿರ್ಮಾಣಗೊಂಡಿತ್ತು. ಅಮೀರ್ ಅಹಮ್ಮದ್ ವೃತ್ತದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಯೂ ಅನಾವರಣಗೊಂಡಿದ್ದು ವಿಶೇಷವಾಗಿತ್ತು.
ಕಲಾತಂಡಗಳ ಮೆರಗು: ರಾಜಬೀದಿ ಉತ್ಸವಕ್ಕೆ ವಿವಿಧ ಕಲಾತಂಡಗಳು, ಮಂಗಳ ವಾದ್ಯ, ಚಂಡೆಮೇಳ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು. ಜೈಶ್ರೀರಾಮ್ ಸೇರಿದಂತೆ ವಿವಿಧ ಘೋಷಣೆಗಳು ಮುಗಿಲು ಮುಟ್ಟಿದವು. ಡೊಳ್ಳು ಕುಣಿತ, ವೀರಗಾಸೆಯ ತಾಳಕ್ಕೆ ಯುವಕ-ಯುವತಿರು, ಮಹಿಳಾ ಮಂಡಳಿಗಳ ಪದಾಧಿಕಾರಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಯುವಕರಿಗೆ ಕೇಸರಿ ರುಮಾಲು ಮತ್ತು ತಿಲಕವಿಟ್ಟು ಸ್ವಾಗತಿಸುತ್ತಿದುದ್ದು ವಿಶೇಷವಾಗಿತ್ತು.
ಎಲ್ಲೆಲ್ಲಿ ರಾಜಬೀದಿ ಉತ್ಸವ?:
ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಾಜಬೀದಿ ಉತ್ಸವ ಎಸ್‌ಪಿಎಂ ರಸ್ತೆ, ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯರಸ್ತೆ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಎಚ್.ರಸ್ತೆ, ಕೋಟೆ ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ತುಂಗಾನದಿ ಸೇರಿತು.