ಚಿತ್ರದುರ್ಗ: ಪೋಕ್ಸೋ ಪ್ರಕರಣಗಳ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಸ್ವಾಮೀಜಿಯಿಂದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಸಿಆರ್‌ಪಿಸಿ 313 ಕಾಯ್ದೆಯನ್ವಯ ಹೇಳಿಕೆ ದಾಖಲಿಸಿಕೊಂಡಿತು.
ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರ ಸಮ್ಮುಖದಲ್ಲಿ ಮಧ್ಯಾಹ್ನ 12ಕ್ಕೆ ಪ್ರಕ್ರಿಯೆ ಆರಂಭವಾಯಿತು. ಪೋಕ್ಸೋ ಸಂಬಂಧ 181/22 ಮೊದಲ ಪ್ರಕರಣದ ‘ಎ’ 1 ಆರೋಪಿಯಾದ ಸ್ವಾಮೀಜಿ ಹೇಳಿಕೆಯನ್ನು ಇನ್ ಕ್ಯಾಮೆರಾ ವಿಡಿಯೋ ರೆಕಾರ್ಡಿಂಗ್ ಮೂಲಕ ದಾಖಲಿಸಿಕೊಳ್ಳಲಾಯಿತು.
313 ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಒಂದು ಭಾಗವಾಗಿದ್ದು, ವಿಚಾರಣೆ ವೇಳೆ ಆರೋಪಿಯನ್ನು ಪ್ರಶ್ನಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ. ಅಲ್ಲದೆ, ಆರೋಪಿತರು ತನ್ನ ವಿರುದ್ಧದ ಸಾಕ್ಷ್ಯಗಳನ್ನು ಎದುರಿಸಲು ಮತ್ತು ಹೇಳಿಕೆ ನೀಡಲು ಅವಕಾಶವಿದ್ದು, ಅದರಂತೆ ಪ್ರಕ್ರಿಯೆ ನಡೆಯಿತು.
‘ಎ’2, ‘ಎ’3 ಆರೋಪಿತರಾದ ರಶ್ಮಿ, ಪರಮಶಿವಯ್ಯ ಕೂಡ ಹೇಳಿಕೆ ನೀಡಲು ಹಾಜರಾಗಿದ್ದರು. ನ್ಯಾಯಾಲಯ ಆರೋಪಿತರ ವಿರುದ್ಧದ ಆರೋಪಗಳು, ಸಾಕ್ಷ್ಯಗಳನ್ನು ವಿವರಿಸುವ ಮೂಲಕ ಪ್ರತಿಕ್ರಿಯಿಸಲು ಅವಕಾಶ ನೀಡಿತು. ಮತ್ತೊಂದು ಪ್ರಕರಣ ಸಂಬಂಧ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಜು. 10ಕ್ಕೆ ದಿನಾಂಕ ನಿಗದಿಗೊಳಿಸಿ ನ್ಯಾಯಾಧೀಶರು ಆದೇಶಿಸಿದರು.
ಷರತ್ತುಬದ್ಧ ಜಾಮೀನಿನಲ್ಲಿರುವ ಸ್ವಾಮೀಜಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಈ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಹೇಳಿಕೆಗಳು ಸ್ಪಷ್ಟವಾಗಿ ಕೇಳಿಸದ ಕಾರಣ ಖುದ್ದು ವಿಚಾರಣೆಗೆ ಅವಕಾಶ ನೀಡಿ ಹೇಳಿಕೆ ದಾಖಲಿಸಿಕೊಂಡಿತು.
ಸರ್ಕಾರಿ ಅಭಿಯೋಜಕ ಜಗದೀಶ್, ಆರೋಪಿತರ ಪರ ವಕೀಲರಾದ ಕೆ.ಬಿ.ಕೆ. ಸ್ವಾಮಿ, ಉಮೇಶ್, ಪ್ರತಾಪ್ ಜೋಗಿ ಇದ್ದರು.