ರಾಜೇಂದ್ರ ಶಿಂಗನಮನೆ ಶಿರಸಿ
ಕೊಯ್ಲು ಮಾಡಿದ ಮೆಕ್ಕೆಜೋಳವನ್ನು ಅಕಾಲಿಕ ಮಳೆಯಿಂದಾಗಿ ಒಣಗಿಸಲಾಗುತ್ತಿಲ್ಲ. ಕಾಳು ಮೊಳಕೆಯೊಡೆಯುವ ಜೊತೆಗೆ ಫಂಗಸ್ಗೆ ತುತ್ತಾಗುತ್ತಿದೆ. ಇದರಿಂದಾಗಿ ರೈತರ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ.
ತಾಲೂಕಿನ ದಾಸನಕೊಪ್ಪ, ಬೆಳ್ಳನಕೇರಿ, ರಾಮಾಪುರ, ಹೆಬ್ಬತ್ತಿ, ಕಲಕರಡಿ, ಮಾಳಂಜಿ, ಮಧುರವಳ್ಳಿ, ಗುಡ್ನಾಪುರ, ಹಾಡಲಗಿ, ಬದನಗೋಡ ಭಾಗದಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ವರ್ಷದಂತೆ ಜೋಳ ಬೆಳೆಯಲಾಗಿದೆ. ವಿವಿಧೆಡೆ ಮೆಕ್ಕೆಜೋಳ ಮುರಿದು ಕಾಳು ಬೇರ್ಪಡಿಸಲಾಗಿದೆ. ಆದರೆ, ಮಳೆ ಕಾಟದಿಂದ ಸರಿಯಾಗಿ ಒಣಗಿಸಲಾಗದೆ, ಇಟ್ಟಲ್ಲೇ ಫಂಗಸ್ ಬಂದು ಮೊಳಕೆಯೊಡೆಯುತ್ತಿದೆ. ಉಳುಮೆ, ಗೊಬ್ಬರ, ಬೀಜ, ಕಾರ್ವಿುಕರು ಸೇರಿ ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು 15ರಿಂದ 20 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ವರುಣನ ವಕ್ರದಷ್ಟಿಯಿಂದಾಗಿ ಖರ್ಚು ಮಾಡಿದ ಹಣವೂ ವಾಪಸಾಗದಂತಹ ಪರಿಸ್ಥಿತಿ ತಲೆದೋರಿದೆ.
ಖರೀದಿ ಕೇಂದ್ರಗಳಿಲ್ಲ: ಸರ್ಕಾರವು ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ಹೇಳುತ್ತಿದೆ. ಆದರೆ, ಈ ಭಾಗದಲ್ಲಿ ಖರೀದಿ ಕೇಂದ್ರಗಳ ಕುರಿತಂತೆ ರೈತರಿಗೆ ಯಾವುದೇ ಮಾಹಿತಿಯಿಲ್ಲ. ಹಾಲಿ ದರ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 1000-1200 ರೂ. ಚಾಲ್ತಿಯಲ್ಲಿ ಇದೆಯಾದರೂ ಖರೀದಿಸಲು ಯಾರೂ ಬರುತ್ತಿಲ್ಲ. ಇದರಿಂದ ಬೆಳೆಯನ್ನು ಏನು ಮಾಡುವುದು ಎಂದು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಯು ಖರೀದಿ ಕೇಂದ್ರ ತೆರೆದು ಯೋಗ್ಯ ಬೆಲೆಗೆ ಮೆಕ್ಕೆಜೋಳ ಖರೀದಿಸಿ ನಮ್ಮ ಕೈ ಹಿಡಿಯಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಕಳೆದ ವರ್ಷ ಕ್ವಿಂಟಾಲ್ಗೆ 1800ರಿಂದ 2000 ರೂ. ವರೆಗೆ ಇದ್ದ ಮೆಕ್ಕೆಜೋಳದ ದರ ಈ ಬಾರಿ ಕ್ವಿಂಟಾಲ್ಗೆ 1000ರಿಂದ 1200 ರೂ. ಗೆ ಕುಸಿದಿದೆ. ಕ್ವಿಂಟಾಲ್ಗೆ ಕನಿಷ್ಠ 2 ಸಾವಿರ ಬೆಲೆ ಇದ್ದರೆ ಮಾತ್ರ ಕಷ್ಟಪಟ್ಟು ದುಡಿದು ಬೆಳೆ ಬೆಳೆದಿದ್ದಕ್ಕೆ ಸಾರ್ಥಕತೆ ಸಿಗುತ್ತದೆ. ಈ ವರ್ಷದ ದರ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ದರವಿಲ್ಲದೆ ಇದ್ದರೂ ಪ್ರತಿ ಬಾರಿಯಂತೆ ಈ ಸಲವು ಮೆಕ್ಕೆಜೋಳ ಬೆಳೆದಿದ್ದು, ಅಕಾಲಿಕ ಮಳೆಯಿಂದ ಫಸಲು ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ.| ವಿನಯ ನಾಯ್ಕ ಬೆಳೆಗಾರ, ಕಲಕರಡಿಅಕಾಲಿಕ ಮಳೆಯಿಂದ ಮೆಕ್ಕೆಜೋಳದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆಲವೆಡೆ ತೆನೆಯಲ್ಲೇ ಮೊಳಕೆಯೊಡೆಯುತ್ತಿದೆ. ಈ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರಸ್ತುತ ಬಿಸಿಲು ವಾತಾವರಣವಿದ್ದು, ರೈತರು ಮೆಕ್ಕೆಜೋಳದ ತೆನೆಯಿಂದ ಕಾಳು ಬಿಡಿಸಿ ಒಣಗಿಸುವುದು ಉತ್ತಮ.| ಮಧುಕರ ನಾಯ್ಕ, ಕೃಷಿ ಇಲಾಖೆ ಶಿರಸಿ ತಾಲೂಕು ಸಹಾಯಕ ನಿರ್ದೇಶಕರು