ನ್ಯೂಸ್

ಶಿಫಾರಸುಗಳ ಪಟ್ಟಿ ಮುಂದಿಟ್ಟ ಜಿಲ್ಲಾಡಳಿತ

ಕೋಲಾರ: ಕೇಂದ್ರದ ವಸತಿ ಯೋಜನೆಯಡಿ ಘಟಕ ವೆಚ್ಚ 2.50 ರಿಂದ 3 ಲಕ್ಷ ರೂ.ಗೆ ಹೆಚ್ಚಿಸುವುದು, ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಕಚೇರಿ ಕಾಂಪೌಂಡ್ ನಿರ್ಮಾಣ, ಸಿಲ್ಕ್ ರೇರಿಂಗ್ ಹೌಸ್ ನಿರ್ಮಾಣಕ್ಕೆ ನರೇಗಾದಡಿ ಅವಕಾಶ ಕಲ್ಪಿಸುವುದು, ಪಿಎಂ ಕೃಷಿ ಸಿಂಚಾಯಿ ಯೋಜನೆಯಡಿ ಸಬ್ಸಿಡಿ ಶೇ.75ಕ್ಕೆ ಹೆಚ್ಚಿಸಲು ಶಿಫಾರಸು ಮಾಡುವಂತೆ ಕೇಂದ್ರದ ಧ್ವನಿಯಾಗಿ ಬಂದಿರುವ ತಂಡಕ್ಕೆ ಜಿಲ್ಲಾಡಳಿತ ಹಾಗೂ ಜಿಪಂ ಮನವಿ ಮಾಡಿದೆ.

ಕೇಂದ್ರದ ಆರ್‌ಡಿಪಿಆರ್ ಸಚಿವಾಲಯದಡಿ ಬರುವ ನರೇಗಾ, ದೀನ್ ದಯಾಳ್ ಅಂತ್ಯೋದಯ, ಎನ್‌ಆರ್‌ಎಲ್‌ಎಂ, ಪಿಎಂ ಗ್ರಾಮೀಣ ಆವಾಸ್ ಯೋಜನೆ, ಪಿಎಂಗ್ರಾಮ ಸಡಕ್ ಯೋಜನೆ, ಪಿಎಂ ಕೃಷಿ ಸಿಂಚಾಯಿ ಯೋಜನೆ, ಸಂಸದರ ಆದರ್ಶ ಗ್ರಾಮ, ಗ್ರಾಪಂಗಳ ಮೂಲ ಸೌಕರ್ಯ ಪರಿಶೀಲನೆಗೆ ಕೇಂದ್ರ ಕಳುಹಿಸಿರುವ ಮಹಾರಾಷ್ಟ್ರದ ಥರ್ಡ್ ಪಾರ್ಟಿ ಏಜೆನ್ಸಿ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದೆ.

ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಡಿಸಿ ಸಿ.ಸತ್ಯಭಾಮ, ವಸತಿ ಯೋಜನೆಯಡಿ ಘಟಕ ವೆಚ್ಚ 1.20 ರೂ.ಗಳಲ್ಲಿ ಈಗಿನ ಎಸ್‌ಆರ್ ದರಕ್ಕೆ ಮನೆ ನಿರ್ಮಾಣ ಕಷ್ಟಸಾಧ್ಯವಾದ್ದರಿಂದ ಘಟಕ ವೆಚ್ಚವನ್ನು 2.50 ರಿಂದ 3 ಲಕ್ಷಕ್ಕೆ ಹೆಚ್ಚಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಹಾಗೂ ಸರ್ಕಾರಿ ಕಚೇರಿಗೆ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾದಡಿ ಅವಕಾಶ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಕೋರಿದರು.

ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ಬರಪೀಡಿತ, ಮಳೆಯಾಶ್ರಿತ ಪ್ರದೇಶಗಳಲ್ಲಿ ನರೇಗಾದಡಿ ಮಾನವ ದಿನಗಳನ್ನು 150ರಿಂದ 200 ದಿನಗಳಿಗೆ ಹೆಚ್ಚಿಸಬೇಕು, ನದಿ ನಾಲೆ ಇಲ್ಲದೆ ಮಳೆಯಾಶ್ರಿತ ಕೋಲಾರದಂತಹ ಜಿಲ್ಲೆಗಳಿಗೆ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ನೀಡುವ ಶೇ.45ರ ಸಬ್ಸಿಡಿಯನ್ನು ಶೇ.75ಕ್ಕೆ ಹೆಚ್ಚಿಸಲು ಶಿಫಾರಸು ಮಾಡಬೇಕು ಎಂದು ಕೋರಿದರು.

ರೇಷ್ಮೆ ಉತ್ಪಾದನೆಯಲ್ಲಿ ಕೋಲಾರ ಮುಂಚೂಣಿಯಲ್ಲಿದ್ದು, ಸಿಲ್ಕ್ ರೇರಿಂಗ್ ಹೌಸ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಬೇರು ಸಹಿತ ನೀಲಗಿರಿ ಮರ ತೆರವು ಮಾಡಲು ನರೇಗಾದಡಿ ಅವಕಾಶ ಕೋರಿ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಅನುಮೋದಿಸಲು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ಸ್ವಚ್ಛ ಸಂಕೀರ್ಣ ಯೋಜನೆಯಡಿ 156 ಗ್ರಾಪಂಗಳಲ್ಲಿ 153 ಗ್ರಾಪಂಗಳಿಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿವೇಶನ ಮಂಜೂರಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ 124 ಗ್ರಾಪಂಗಳ ಡಿಪಿಆರ್‌ನಲ್ಲಿ 102 ಮಂಜೂರಾತಿ ಆಗಿದೆ. ಉಳಿದ ಡಿಪಿಆರ್ ಶೀಘ್ರ ಪೂರ್ಣಗೊಳಿಸಲಾಗುವುದು. ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದರು. ಕೇಂದ್ರ ತಂಡದ ಅಧಿಕಾರಿ ವಿನಾಯಕ್ ಗಾಡೇ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಸೇರಿ ಕೃಷಿ, ತೋಟಗಾರಿಕೆ, ಆರ್‌ಡಿಪಿಆರ್, ರೇಷ್ಮೆ ಇನ್ನಿತರ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸರ್ಕಾರದ ಯೋಜನೆಗಳ ಅನುಷ್ಟಾನ, ಫಲಾನುಭವಿಗಳ ಆಯ್ಕೆ ಗ್ರಾಪಂ ಅಧ್ಯಕ್ಷನ ಮನೆ ಬಾಗಿಲ ಮುಂದೆ ನಡೆಯದೆ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯಬೇಕು, ಯೋಜನೆಗಳು ಮಾರ್ಗಸೂಚಿಯಂತೆ ಅನುಷ್ಠಾನ, ಪಾರದರ್ಶಕತೆ, ಗುಣಮಟ್ಟ ಕಾಯ್ದುಕೊಳ್ಳುವ, ಆಗಬೇಕಾದ ಸುಧಾರಣೆಗಳೇನು ಎಂಬ ಬಗ್ಗೆ ಕ್ಷೇತ್ರ ಭೇಟಿ ವೇಳೆ ಖುದ್ದು ಪರಿಶೀಲಿಸಲಾಗುವುದು. ಅನಿಲ್ ಗಾಯ್ಕವಾಡ್, ಕೇಂದ್ರ ತಂಡದ ಅಧಿಕಾರಿ