ನ್ಯೂಸ್

ಶಿಗ್ಗಾಂವಿ ತಹಸೀಲ್ದಾರ್ ಹುದ್ದೆಗೆ ಕಿತ್ತಾಟ...?

ಹಾವೇರಿ: ಶಿಗ್ಗಾಂವಿ ತಹಸೀಲ್ದಾರ್ ಹುದ್ದೆಗೆ ಇಬ್ಬರ ನಡುವೆ ನಡೆದಿರುವ ಕಿತ್ತಾಟ ಪ್ರಕರಣ ಮುಂದುವರಿದಿದ್ದು, ಫೆ. 6ರಂದು ಜಿಲ್ಲಾಧಿಕಾರಿಗಳು ಶಿಗ್ಗಾಂವಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಬಾರದು ಎಂದು ಆದೇಶಿಸಿದ್ದಾರೆ.

ಆದರೂ ಅದೇದಿನ ಸಂಜೆ ಶಿಗ್ಗಾಂವಿ ತಹಸೀಲ್ದಾರ್ ಆಗಿ ಚಾರ್ಜ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದನ್ನು ಗಮನಿಸಿದರೆ ಜಿಲ್ಲಾಧಿಕಾರಿ ಆದೇಶವನ್ನು ಗಾಳಿಯವರು ಉಲ್ಲಂಘಿಸಿರುವುದು ಕಂಡುಬರುತ್ತದೆ.

ಕೆಎಟಿಯಿಂದ ವರ್ಗಾವಣೆ ತಡೆ ಆದೇಶ ತಂದ ಚಂದ್ರಶೇಖರ ಗಾಳಿಯವರು ಫೆ. 6ರಂದು ಜಿಲ್ಲಾಧಿಕಾರಿಗೆ ಆದೇಶ ಪ್ರತಿಯೊಂದಿಗೆ ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಸರ್ಕಾರವು ಫೆ. 1ರಂದು ಶಿಗ್ಗಾಂವಿ ತಹಸೀಲ್ದಾರರನ್ನಾಗಿ ಪ್ರಕಾಶ ಕುದರಿಯವನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಫೆ. 3ರಂದು ನೀವೇ(ಚಂದ್ರಶೇಖರ ಗಾಳಿ) ಸ್ವ ಇಚ್ಛೆಯಿಂದ ಪ್ರಕಾಶ ಕುದರಿಯವರಿಗೆ ತಹಸೀಲ್ದಾರ್ ಚಾರ್ಜ್ ಕೊಟ್ಟಿದ್ದೀರಿ. ಕೆಎಟಿಯ ಆದೇಶದಲ್ಲಿ ಈಗಾಗಲೇ ವರ್ಗಾವಣೆಗೊಂಡಿರುವ ನಿಮ್ಮನ್ನು ಶಿಗ್ಗಾಂವಿ ತಹಸೀಲ್ದಾರ್ ಆಗಿ ಪ್ರಭಾರ ವಹಿಸಿಕೊಳ್ಳಬೇಕೆಂದಾಗಲಿ, ಪುನಃ ಅದೇ ಹುದ್ದೆಯನ್ನು ವಹಿಸಿಕೊಳ್ಳಬೇಕು ಎಂಬ ಆದೇಶವಿಲ್ಲ. ಹೀಗಾಗಿ ತಾವು ಮೇಲ್ಮನವಿ ಪ್ರಾಧಿಕಾರದಿಂದ ಆದೇಶ ಪಡೆದುಕೊಳ್ಳುವುದು ಸೂಕ್ತ. ಅಲ್ಲಿಯವರೆಗೆ ಶಿಗ್ಗಾಂವಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಬಾರದು ಎಂದು ಆದೇಶಿಸಿದ್ದಾರೆ. ಆದರೂ ಫೆ. 6ರಂದೇ ಚಂದ್ರಶೇಖರ ಗಾಳಿಯವರು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಈ ಕುರಿತು ಕಾನೂನು ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ನನ್ನನ್ನು ವರ್ಗಾವಣೆ ಮಾಡಿಸಿದ್ದು ಗೃಹ ಸಚಿವರು, ತಾಲೂಕಿನ ಸಮಸ್ಯೆಗೆ ಸಚಿವರು ಸ್ಪಂದಿಸುತ್ತಿಲ್ಲ ಎಂಬೆಲ್ಲ ಆರೋಪಗಳನ್ನು ತಹಸೀಲ್ದಾರ್ ಗಾಳಿ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ ತಹಸೀಲ್ದಾರ್ ವರ್ಗಾವಣೆ ವಿಚಾರ ನ್ಯಾಯಾಲಯದಲ್ಲಿದೆ. ಅದರ ಕುರಿತು ಸದ್ಯ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.