ಮೂಡಿಗೆರೆ: ದೇಶದ ಸರ್ವ ಜನಾಂಗದವರಿಗೆ ಸಮಾನತೆಯ ಸಂವಿಧಾನವನ್ನು ಅರ್ಪಣೆ ಮಾಡಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರು ತಾರತಮ್ಯಗಳನ್ನು ಕಿತ್ತೊಗೆಯಲು ಹಗಲಿರುಳು ಶ್ರಮಿಸಿದ್ದರು. ಅವರ ಶ್ರಮ ವ್ಯರ್ಥವಾಗದಂತೆ ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಕಪುಚಿನ್ ಕೃಷಿಕ ಸೇವಾ ಕೇಂದ್ರದ ಸಂಪನ್ಮೂಲ ವ್ಯಕ್ತಿ ನವೀನ್ ಆನೆದಿಬ್ಬ ಹೇಳಿದರು.
ವಿಮುಕ್ತಿ ಮತ್ತು ಕಪುಚಿನ್ ಕೃಷಿಕ ಸೇವಾ ಕೇಂದ್ರದಿಂದ ಪಟ್ಟಣದ ಸಿಂಧು ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗು ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ಪೂರ್ಣ ಪ್ರಮಾಣದ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಶಾಲೆ, ಕಾಲೇಜಿಗೆ ಬೇಸಿಗೆ ರಜೆ ದೊರೆತಿರುವ ಸಂತೋಷದಲ್ಲಿ ನೀರಿನಲ್ಲಿ ಈಜಾಡುವುದು ಹಾಗೂ ಜೀವಕ್ಕೆ ಅಪಾಯವಾಗುವಂತಹ ಆಟಗಳನ್ನು ಆಡದೆ ಪುಸ್ತಕದ ಕಡೆ ಗಮನಹರಿಸಬೇಕು. ಮಕ್ಕಳು ಸಮಾಜದ ಆಸ್ತಿ. ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯವಿದೆ ಎಂದು ತಿಳಿಸಿದರು.
ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ, ಬಾಳೂರು ಗ್ರಾಪಂ ಉಪಾಧ್ಯಕ್ಷೆ ಗೀತಾ, ನೃತ್ಯ ಶಿಕ್ಷಕ ಜೀವನ್, ಆದರ್ಶ, ಎಂ.ಬಿ.ವಿಜಯಲಕ್ಷ್ಮೀ, ಶಶಿಕಲಾ, ಪವಿತ್ರಾ, ದೀಕ್ಷಿತ್ ಹುರುಡಿ ಇತರರಿದ್ದರು