ಹಿರೀಸಾವೆ: ಶೈಕ್ಷಣಿಕ ಹಂತದಿಂದಲೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಎಂದು ಶಾರದ ಅನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಬಿ.ಉದಯಕುಮಾರ್ ಹೇಳಿದರು.
ಇಲ್ಲಿನ ಶಾರದ ಅನಿಕೇತನ ವಿದ್ಯಾಸಂಸ್ಥೆಯಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಹೆಚ್ಚಿನ ಅವಕಾಶ ಇದೆ ಎಂದರು.
ಹಿರೀಸಾವೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎ.ಪ್ರಮೋದ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಿಂದಲೇ ಸಾಮಾಜಿಕ ಕೆಲಸಗಳನ್ನು ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು.
ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿ ಸಂಘದವರು ಅಭಿನಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ಶ್ಯಾಮಲಾ ಉದಯಕುಮಾರ್, ಪಿಎಸಿಸಿಬಿ ನಿರ್ದೇಶಕ ಎಚ್.ಕೆ.ವೆಂಕಟೇಶ್, ಮುಖ್ಯಶಿಕ್ಷಕ ಧರ್ಮರಾಜು ಹಾಗೂ ಇತರರಿದ್ದರು.