ನ್ಯೂಸ್

ಶಿಕ್ಷಣ ಸಿಗದಿದ್ದರೆ ಸಾಮಾಜಿಕ ಸಮಸ್ಯೆ ಅರಿತುಕೊಳ್ಳುವುದು ಅಸಾಧ್ಯ

ಸಮರ್ಪಕವಾಗಿ ಶಿಕ್ಷಣ ದೊರೆಯದ ವ್ಯಕ್ತಿಗೆ ಸಾಮಾಜಿಕ ಸಮಸ್ಯೆೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಶಂಕರ ಗಣಪತಿ ಪಂಡಿತ್ ಹೇಳಿದರು.

ನಗರದ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಶಾರದಾ ವಿಲಾಸ ಶಿಕ್ಷಣ ಸಂಸ್ಥೆೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮೈಸೂರು ವಕೀಲರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ವಕೀಲರಾಗಲು ಕಠಿಣ ಪರಿಶ್ರಮ ಅಗತ್ಯ. ಪರಿಶ್ರಮ ಇಲ್ಲದೆ ಯಾವ ಕೆಲಸದಲ್ಲೂ ಗುರಿ ಮುಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನ ಮತ್ತೆೆ ಬರುವುದಿಲ್ಲ ನಿಜ. ಆದರೆ ಅದನ್ನು ಆನಂದಿಸುವುದರೊಂದಿಗೆ ಸಮಯ ಹೊಂದಾಣಿಕೆ ಮಾಡಿಕೊಂಡು ಗುರಿ ಸಾಧನೆಗೂ ಸಮಯ ಮೀಸಲಿಡಬೇಕು ಎಂದು ಹೇಳಿದರು.

ಪದವಿಯ ಬಳಿಕ ಉದ್ಯೋಗ ವಲಯಕ್ಕೆೆ ಪ್ರವೇಶಿಸಿದಾಗ ಅನೇಕ ಸವಾಲು ಎದುರಾಗುತ್ತವೆ. ನಮಗೆ ನೀಡಿರುವ ಕೆಲಸವನ್ನು ಆನಂದಿಸುತ್ತ ಮಾಡಿದಾಗ ಮಾತ್ರ ಸವಾಲನ್ನು ಮೆಟ್ಟಿ ನಿಲ್ಲಬಹುದು ಎಂದು ಸಲಹೆ ನೀಡಿದರು.

ಬಹುತೇಕ ಜನರಿಗೆ ಹಕ್ಕು ಮತ್ತು ಕರ್ತವ್ಯದ ಪಾಲನೆಯ ಅರಿವಿಲ್ಲ. ಹಕ್ಕನ್ನಷ್ಟೇ ಪ್ರತಿಪಾದಿಸುತ್ತಾರೆ. ಆದರೆ ಪಾಲನೆ ಮಾಡಬೇಕಾದ ಕರ್ತವ್ಯದ ಬಗ್ಗೆೆ ಅವರು ಗಮನ ಹರಿಸುವುದಿಲ್ಲ. ಸಂವಿಧಾನ ಒದಗಿಸಿರುವ ಹಕ್ಕು ಹಾಗೂ ಕರ್ತವ್ಯದ ಅರಿವಿದ್ದಾಗ ಉತ್ತಮ ನಾಗರಿಕರಾಗಬಹುದು. ಹೀಗಾಗಿ ಕಾನೂನು ವಿದ್ಯಾರ್ಥಿಗಳು ಜನರಿಗೆ ನ್ಯಾಯ ಪಡೆಯುವ ಮಾರ್ಗ, ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆಯ ಬಗ್ಗೆೆ ಜನರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರೂ ಅವರಿಗೆ ದೊರೆಯಬೇಕಾದ ನ್ಯಾಯದಿಂದ ವಂಚಿತರಾಗಬಾರದು. ನ್ಯಾಯವು ಹಣ, ಜಾತಿ, ಧರ್ಮವನ್ನು ಮೀರಿದ್ದಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬರು ಅವರಿಗೆ ಸಿಗಬೇಕಾದ ನ್ಯಾಯವು ದೊರೆಯಬೇಕಾಗಿದೆ. ಸಾಮಾನ್ಯ ವ್ಯಕ್ತಿಗೂ ನ್ಯಾಯ ವ್ಯವಸ್ಥೆೆ ಬಗ್ಗೆೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ನೀಡುತ್ತದೆ. ಈ ಸೇವೆಯಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಜಿಲ್ಲಾ ಸೆಷನ್ ನ್ಯಾಯಾಧೀಶ ರವೀಂದ್ರ ಹೆಗಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜೆ.ದಿನೇಶ್, ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಶಾರದಾವಿಲಾಸ ವಿದ್ಯಾಸಂಸ್ಥೆೆ ಕಾರ್ಯದರ್ಶಿ ಎನ್.ಚಂದ್ರಶೇಖರ್, ಕಾಲೇಜು ಆಡಳಿತ ಮಂಡಳಿ ಸದಸ್ಯ ಎಸ್.ಎಲ್.ರಾಮಚಂದ್ರ, ಡೀನ್ ಎ.ಎಂ.ಬೊಲ್ಲಮ್ಮ, ಪ್ರಾಂಶುಪಾಲ ಬಿ.ಪಿ.ಮಹೇಶ ಇದ್ದರು.