ಅಲಗೇರಿಮಂಡ್ರಿ ಗ್ರಾಮದಲ್ಲಿ ಆಯೋಜಿಸಿದ್ದ ದೀವರ ಸುಗ್ಗಿಹಬ್ಬ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಗಣಪತಿ ಮಾಕನಕಟ್ಟೆ, ಉದಯ್ ನಾಯಕ್, ಡಿ.ಎನ್.ಹಿರಿಯಪ್ಪ, ಕಲಗೋಡು ರತ್ನಾಕರ್, ಮಧು ಗಣಪತಿ ಇತರರಿದ್ದರು. 
ನ್ಯೂಸ್

ಶಿಕ್ಷಣ, ಸಂಘಟನೆಯಿಂದ ಸಮಾಜದ ಪ್ರಗತಿ

ಹೊಸನಗರ: ನಿರಂತರ ಶೋಷಣೆ, ತುಳಿತಕ್ಕೆ ಒಳಗಾಗಿದ್ದ ದೀವರ ಸಮುದಾಯ ಇಂದು ಶಿಕ್ಷಣ ಹಾಗೂ ಸಂಘಟನೆ ಮೂಲಕ ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬಲಾಢ್ಯವಾಗಿ ಬೆಳೆದು ನಿಂತಿರುವುದು ಆಶಾದಾಯಕ ಬೆಳವಣಿಗೆ ಎಂದು ತಾಲೂಕಿನ ನಿಟ್ಟೂರಿನ ಶ್ರೀ ನಾರಾಯಣಗುರು ರೇಣುಕಾನಂದ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅಲಗೇರಿ ಮಂಡ್ರಿ ಗ್ರಾಮದ ಚನ್ನಮಾಜಿ ಪ್ರೌಢಶಾಲೆ ಆವರಣದಲ್ಲಿ ಬಟ್ಟೆಮಲ್ಲಪ್ಪದ ಧೀರ ದೀವರ ಸಂಘದ ಮೊದಲ ವಾರ್ಷಿಕೋತ್ಸವ ಅಂಗವಾಗಿ ಅಯೋಜಿಸಿದ್ದ ದೀವರ ಸುಗ್ಗಿಹಬ್ಬದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾಜಿ ಸಿಎಂ ದಿ. ಎಸ್.ಬಂಗಾರಪ್ಪ ಹಾಗೂ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಂತಹ ಹಿರಿಯ ನಾಯಕರ ಮಾರ್ಗದರ್ಶನ, ಸಹಕಾರದಲ್ಲಿ ಯುವಜನತೆ ಸಂಘಟಿತರಾಗಬೇಕು ಎಂದರು.

ಸಾರಗನಜೆಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು ಮಾತನಾಡಿ, 26 ಉಪ ಪಂಗಡ ಒಳಗೊಂಡ ಆರ್ಯ ಈಡಿಗ ಸಮಾಜದ ಬಹುಪಾಲು ಮಂದಿ ಕೃಷಿಯನ್ನೇ ಅವಲಂಬಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದಾರೆ ಎಂದು ತಿಳಿಸಿದರು.

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಮಾತನಾಡಿ, ನಮ್ಮ ಸಮುದಾಯ ಆರ್ಥಿಕವಾಗಿ ಮುಂದುವರಿದ್ದರೂ ಸಂಸ್ಕೃತಿ, ಸಂಪ್ರದಾಯ ಆಚರಣೆ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದೆ. ದಾನ-ಧರ್ಮ ಮಾಡುವವರ ಸಂಖ್ಯೆ ವಿರಳ. ಸಮಾಜದ ಮಠ, ದೇಗುಲಗಳ ರಕ್ಷಣೆಗೆ ಯುವಸಮೂಹ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ. ಜಿ.ಡಿ.ನಾರಾಯಣಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಗಣಪತಿ ಮಾಕನಕಟ್ಟೆ, ಉದಯ್ ನಾಯಕ್, ವಕೀಲ ಡಿ.ಎನ್.ಹಿರಿಯಪ್ಪ, ಕಲಗೋಡು ರತ್ನಾಕರ್, ಮಧು ಗಣಪತಿ ಇತರರಿದ್ದರು.