ಬೀರೂರು: ಶಿಕ್ಷಕ ಸ್ವತಃ ವಿದ್ಯಾರ್ಥಿಯಾಗಿ ಜ್ಞಾನಗಳಿಕೆಯ ಹಾದಿಯಲ್ಲಿ ಸಾಗಿದಾಗ ಮಕ್ಕಳ ಉಜ್ವಲ ಭವಿಷ್ಯ, ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಜಗಳೂರು ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ರಾಜಯೋಗಿನಿ ಭಾರತಿ ಅಕ್ಕ ತಿಳಿಸಿದರು.
ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಆವರಣದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಆತ್ಮಸ್ಥೈರ್ಯ, ಭಯ ಹೋಗಲಾಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಸುಸಂಸ್ಕೃತ ಸಮಾಜ ನಿರ್ಮಾಣದ ಅಡಿಗಲ್ಲು ಎಂಬುದನ್ನು ಹಲವು ನಿದರ್ಶನಗಳ ಮೂಲಕ ತಿಳಿಸಿದರು.
ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದೇವೆ. ಆದರೆ ಶಿಕ್ಷಣ ಕೊಡುತ್ತಿದ್ದೇವಾ ಎಂಬ ಆತ್ಮಾವಲೋಕನದ ಕಾಲವಾಗಿದೆ. ಜೀವನ ಶೈಲಿಯಲ್ಲಿ ಶಿಕ್ಷಣದ ಪ್ರತಿರೂಪ ಕಾಣೆಯಾಗುತ್ತಿರುವುದು ನೋವಿನ ಸಂಗತಿ. ಸಂಸ್ಕಾರಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯ. ಅಧ್ಯಾತ್ಮ ಜವಾಬ್ದಾರಿಯುತ ಶಿಕ್ಷಣದ ಒಂದು ಭಾಗ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕಿ ಕೆ.ಎಸ್.ವಸಂತಮ್ಮ ಮಾತನಾಡಿ, ಡಾ. ಎಸ್.ರಾಧಾಕೃಷ್ಣನ್ ಬದುಕು, ಸಾಧನೆ, ಹಿಂದಿನ ಶಿಕ್ಷಣ ಮತ್ತು ಬದಲಾದ ಶಿಕ್ಷಣ ವ್ಯವಸ್ಥೆಯಿಂದ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳು, ಶಿಕ್ಷಕರ ಜವಾಬ್ದಾರಿಗಳ ಕುರಿತಂತೆ ಅನಿಸಿಕೆಗಳನ್ನು ಹಂಚಿಕೊಂಡರು. ರಂಭಾಪುರಿ ಖಾಸಾಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಶಿಕ್ಷಣ ಕಲಿಕೆಗೆ ಒತ್ತು ನೀಡಿದಾಗ ಸಮಾನ ಶಿಕ್ಷಣ ನೀತಿಗೆ ಬಲ ತುಂಬಲು ಸಾಧ್ಯ ಎಂದರು.
ಲಯನ್ಸ್‌ಕ್ಲಬ್ ಅಧ್ಯಕ್ಷ ಎಂ.ಮಲ್ಲಪ್ಪ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುವರ್ಣ ಒಡೆಯರ್, ಬ್ರಹ್ಮಕುಮಾರಿ ಪದ್ಮಕ್ಕ ಹಾಗೂ ನಿವೃತ್ತ ಶಿಕ್ಷಕರನ್ನು ಈಶ್ವರೀಯ ಗೌರವ ನೀಡಿ ಪುರಸ್ಕರಿಸಲಾಯಿತು. ಬ್ರಹ್ಮಕುಮಾರಿ ವಸಂತಕ್ಕ, ಶಿವಾನಿ ಅಕ್ಕ, ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಲರಾಮ ಇತರರಿದ್ದರು.