ಎನ್.ಆರ್.ಪುರ: ಸಂಜೀವಿನಿ ಒಕ್ಕೂಟವು ಪ್ರತಿ ವರ್ಷ ಆಂತರಿಕ ಮತ್ತು ಶಾಸನ ಬದ್ಧ ಲೆಕ್ಕ ಪರಿಶೋಧನೆ ಮಾಡಿಸಬೇಕು ಎಂದು ಎನ್‌ಆರ್‌ಎಲ್‌ಎಂನ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕ ಸುಬ್ರಮಣ್ಯ ಸಲಹೆ ನೀಡಿದರು.
ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ನಾಗಲಾಪುರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ವಾರ್ಷಿಕ ಮಹಾ ಸಭೆ ಆಯೋಜನೆ ಮಾಡಬೇಕು. ಒಕ್ಕೂಟದ ವಾರ್ಷಿಕ ಆದಾಯ, ವೆಚ್ಚಗಳ ಬಗ್ಗೆ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಬೇಕು. ಒಕ್ಕೂಟದ ಮುಂದಿನ ಗುರಿಯ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾಬೆನ್ನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಜೀವಿನಿ ಒಕ್ಕೂಟವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸ್ವಸಹಾಯ ಸಂಘದ ಸದಸ್ಯರು ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲೂ ಭಾಗವಹಿಸಬೇಕು. ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆವಹಿಸಿದ್ದ ನಾಗಲಾಪುರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಮಾತನಾಡಿ, ಸಂಜೀವಿನಿ ಒಕ್ಕೂಟವು ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳ ಬಗ್ಗೆ ಯೋಜನೆಗಳನ್ನು ತಯಾರಿಸಿದ್ದೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರ್ಹ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆಗೊಳ್ಳಬೇಕು. ಒಕ್ಕೂಟದಿಂದ ಸಿಗುವ ಸಾಲ ಸೌಲಭ್ಯಗಳನ್ನು, ಅನುದಾನವನ್ನು ಸ್ವಸಹಾಯ ಸಂಘದ ಸದಸ್ಯರು ಉಪಯೋಗಿಸಿಕೊಳ್ಳಬೇಕು ಎಂದರು.
ವಿದ್ಯಾಕುಮಾರಿ ವರದಿ ವಾಚಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ, ಸುಮಿತ್ರಾ, ನಾಗಲಾಪುರ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಮೇರಿ, ಖಜಾಂಚಿ ದಿವ್ಯ, ಉಪಾಧ್ಯಕ್ಷೆ ಸೌಮ್ಯ, ಪಶು ಸಖಿ ರುಕ್ಸಾನಾ, ಕೃಷಿ ಸಖಿ ಅನ್ನಪೂರ್ಣ, ಎನ್.ಆರ್.ಎಲ್.ಎಂ ಯೋಜನೆಯ ಸಿಬ್ಬಂದಿಗಳಾದ ಗಿರೀಶ್, ಚೇತನ್, ಎಲ್‌ಸಿಆರ್‌ಪಿಗಳಾದ ನಿರ್ಮಲ, ರಾಧಾ ಇದ್ದರು.