ನ್ಯೂಸ್

ಶಾಸಕರಿಂದ ಪ್ರತಿಯೊಂದು ಸಮಾಜಕ್ಕೂ ಸವಲತ್ತು

ಹುಣಸೂರು: ಶಾಸಕ ಎಚ್.ಪಿ. ಮಂಜುನಾಥ್ ತಾಲೂಕಿನ ಸಣ್ಣಪುಟ್ಟ ಸಮಾಜಗಳಿಗೆ ಹೊಂಗೆಮರ ನೀಡುವ ನೆರಳಿನಂತೆ ಆಶ್ರಯ, ಬೆಂಬಲ ನೀಡುವ ತತ್ವಧಾರಿತ ರಾಜಕಾರಣಿಯಾಗಿದ್ದಾರೆಂದು ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಶ್ರೀಮನ್ಮೂಲ ಮಠದ ಶ್ರೀ ಗುರುಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.


ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ವತಿಯಂದ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 3ನೇ ವರ್ಷದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಮತ್ತು 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.


ವಿಶ್ವಕರ್ಮ ಸಮಾಜ ವಿಶ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬ ಆಸ್ತಿಕನೂ ಪೂಜಿಸುವ ದೇವರಮೂರ್ತಿ ವಿಶ್ವಕರ್ಮನಿಂದ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಕಳೆದೊಂದು ದಶಕದಿಂದ ಸಣ್ಣಪುಟ್ಟ ಸಮಾಜಗಳನ್ನು ಗುರುತಿಸಿ ಅವರಿಗೆ ಅಗತ್ಯ ಬೆಂಬಲ, ಸವಲತ್ತುಗಳನ್ನು ನೀಡುವಲ್ಲಿ ಶಾಸಕ ಮಂಜುನಾಥ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಹೊಂಗೆಮರದ ಅಡಿಯಲ್ಲಿ ನೆರಳು ಎಂತಹವರ ಬೇಗೆಯನ್ನೂ ತೀರಿಸುತ್ತದೆ. ಅಂತೆಯೇ, ತಮಗೆ ಯಾವುದೇ ರಾಜಕಾರಣಿಯ ಬೆಂಬಲವಿಲ್ಲವೆಂದು ಕೊರಗುತ್ತಿದ್ದ ತಾಲೂಕಿನ ಸಣ್ಣಪುಟ್ಟ ಸಮಾಜಗಳು ಮಂಜುನಾಥ್‌ರ ನಾಯಕತ್ವದಲ್ಲಿ ನೈತಿಕ ಬೆಂಬಲದೊಂದಿಗೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದ್ದಾರೆ ಎಂದು ಶ್ಲಾಘಿಸಿದರು.


ಶಾಸಕ ಮಂಜುನಾಥ್ ಮಾತನಾಡಿ, ಗುಡಿಯಲ್ಲಿನ ದೇವರ ವಿಗ್ರಹವನ್ನು ಕಂಡು ಪೂಜಿಸುವುದು ನಮ್ಮ ವಾಡಿಕೆ. ಆದರೆ, ವಿಶ್ವಕರ್ಮ ಸಮಾಜದ ಶಿಲ್ಪಿ ತನ್ನ ಮನಸ್ಸಿನಲ್ಲಿಯೇ ದೇವರ ಆಕಾರವನ್ನು ಪರಿಕಲ್ಪಿಸಿ ಅದರಂತೆ ಸಮಾಜದ ಮುಂದೆ ಇಡುತ್ತಾನೆ. ಹಾಗಾಗಿ, ನೇರವಾಗಿ ದೇವರೊಂದಿಗೆ ಸಂಬಂಧ ಹೊಂದಿರುವವನು ವಿಶ್ವಕರ್ಮನೇ ಹೊರತು ಇನ್ಯಾರು ಇಲ್ಲ. ತಾಲೂಕಿನಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳನ್ನು ಗುರುತಿಸಿ ಅವರೂ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಉನ್ನತಿಗೇರಲು ನನ್ನ ಅಧಿಕಾರಾವಧಿಯಲ್ಲಿ ಸತತ ಶ್ರಮಿಸಿದ್ದೇನೆ. ನಾನೂ ಒಬ್ಬ ಸಣ್ಣ ಸಮುದಾಯದಿಂದಲೇ ಬಂದವನಾಗಿದ್ದು, ಅವರ ನೋವು, ನಲಿವುಗಳು ನನಗೆ ತಿಳಿದಿದೆ. ಮುಂದಿನ ದಿನಗಳಲ್ಲೂ ಇಂತಹ ಸಮುದಾಯದ ಏಳಿಗೆಗಾಗಿಯೇ ದುಡಿಯುತ್ತೇನೆ ಎಂದರು.


ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ಕೃಷ್ಣಚಾರ್, ಸರ್ವೇಯರ್ ಕುಮಾರ್, ಅಣ್ಣಯ್ಯನಾಯಕ, ಕೆ.ಬಿ. ಚಂದ್ರಾಚಾರ್, ಮಹೇಶ್, ಬಿ.ಎಸ್.ಗಂಗಾಧರಾಚಾರ್, ಜಯಲಕ್ಷ್ಮೀ ಮಹದೇವರಾಜು ಹಾಗೂ ಸಮಾಜದ ಬಂಧುಗಳು ಹಾಜರಿದ್ದರು.