ಮದ್ದೂರು ತಾಲೂಕಿನ ದುಂಡನಹಳ್ಳಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿದರು. ಗ್ರಾಮಸ್ಥರು ಹಾಗೂ ಜೆಡಿಎಸ್ ಮುಖಂಡರು ಇದ್ದರು. 
ನ್ಯೂಸ್

ಶಾಶ್ವತ ನೀರಾವರಿ ಯೋಜನೆ ಜಾರಿ

ಮದ್ದೂರು: ತಾಲೂಕಿನಾದ್ಯಂತ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳುವ ಮೂಲಕ ಮದ್ದೂರು ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿಯ ಚಾಕನಕೆರೆ, ಬೆಟ್ಟದಾಸನದೊಡ್ಡಿ, ಕಂಪಲಾಪುರ, ಕೆಸ್ತೂರು, ಮಾಚಹಳ್ಳಿ, ತೂಬಿನಕೆರೆ, ತೊರೆಶೆಟ್ಟಳ್ಳಿ, ಆತಗೂರು, ಆಲಂಶೆಟ್ಟಹಳ್ಳಿ, ವಳಗೆರೆದೊಡ್ಡಿ, ದುಂಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಮುಂದಿನ 50 ವರ್ಷಗಳ ಕಾಲ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಶಿಂಷಾ ನದಿಯಿಂದ ಆತಗೂರು ಹೋಬಳಿಯ ಅಂಕನಾಥಪುರ, ಅರಕನಹಳ್ಳಿ, ಕುಂದನಕುಪ್ಪೆ ಭಾಗಕ್ಕೆ ನೀರು ತುಂಬಿಸುವ ಮತ್ತು ಲಿಂಗಸಂದ್ರ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗಿದೆ ಎಂದರು.

ಈ ಭಾಗದಲ್ಲಿ ತೋಟಗಾರಿಕೆ ಅಭಿವೃದ್ಧಿಪಡಿಸಲು ಚಿಕ್ಕ ಅಂಕನಹಳ್ಳಿ ಬಳಿಯಲ್ಲಿ 50 ಎಕರೆ, ನವಿಲೇ ಬಳಿ 10 ಎಕರೆ ತೋಟಗಾರಿಕೆಗೆ ಇಲಾಖೆಗೆ ಭೂಮಿ ನೀಡಲಾಗುತ್ತಿದೆ. ರೇಷ್ಮೆ ಇಲಾಖೆಗೆ ಚಿಕ್ಕಅಂಕನಹಳ್ಳಿ ಬಳಿ 20 ಎಕರೆ ಭೂಮಿ ನೀಡಲಾಗುತ್ತಿದೆ ಎಂದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಗ್ರಾಪಂ ಅಧ್ಯಕ್ಷ ರವಿ, ಜೆಡಿಎಸ್ ಮುಖಂಡರಾದ ಶ್ರೀನಿವಾಸ್, ಹೂತಗೆರೆ ದಿಲೀಪ್, ರಮೇಶ್, ಸಿದ್ದರಾಜು, ಜಗದೀಶ್, ಆನಂದ್, ವೆಂಕಟೇಶ್ ಇದ್ದರು.