ನ್ಯೂಸ್

ಶಾಲೆಗಳ ಮೇಲೆ ಕರೊನಾ ಕರಿನೆರಳು

| ಗಂಗಾಧರ್ ಬೈರಾಪಟ್ಟಣ ರಾಮನಗರ

ಕರೊನಾ ಮೂರನೇ ಅಲೆ ಶಾಲಾ ವಿದ್ಯಾರ್ಥಿಗಳ ಮೇಲೆ ವ್ಯಾಪಿಸಿದ್ದು, ಶಾಲೆಯ ಚಟುವಟಿಕೆ ಮೇಲೆ ಕರಿ ನೆರಳು ಚಾಚಿದೆ.

ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕರೊನಾ ಆರ್ಭಟ ಹೆಚ್ಚಿದ್ದು, ಜ.15ರ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 800ರ ಗಡಿ ದಾಟಿದೆ. ಆತಂಕದ ವಿಷಯವೆಂದರೆ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚಾಗಿ ಸೋಂಕಿಗೆ ಟಾರ್ಗೆಟ್ ಆಗುತ್ತಿದ್ದು, ಶಾಲೆಗಳಲ್ಲಿ ಹಾಜರಾತಿ ಕಡಿಮೆ ಆಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಶುಕ್ರವಾರ ಸಂಜೆ ಅಂತ್ಯಕ್ಕೆ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ 63 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಕೆಲವು ಶಾಲೆಗಳಲ್ಲಿ ಸಾಮೂಹಿಕವಾಗಿ ಸೋಂಕು ಪತ್ತೆ ಆಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಒಂದಿಬ್ಬರು ಮಕ್ಕಳಲ್ಲಿ ಕಂಡುಬಂದಿದೆ. ಇದು ಶಾಲೆಗಳು ಹಾಗೂ ಆಯಾ ಗ್ರಾಮಗಳ ಜನತೆಯಲ್ಲಿ ಆತಂಕ ಮೂಡಿಸಿದೆ. ಇನ್ನು ಸೋಂಕಿತ ಮಕ್ಕಳು ಸಂಪರ್ಕದಲ್ಲಿದ್ದವರ ಹುಡುಕಾಟ ಸಹ ನಡೆಯುತ್ತಿದ್ದು, ಇದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆಬಿಸಿ ತಂದಿದೆ. ಇದರ ಜತೆಗೆ ಸರ್ಕಾರಿ ಶಾಲೆಯ 13 ಶಿಕ್ಷಕರಿಗೂ ಸೋಂಕು ತಗುಲಿದ್ದು, ಇವರು ಪಾಠ ಮಾಡಿರುವ ತರಗತಿಗಳ ಮಕ್ಕಳ ಆತಂಕ ಹೆಚ್ಚಿಸಿದೆ.

ವಿದ್ಯಾರ್ಥಿಗಳು ಬರುತ್ತಿಲ್ಲ: ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಹಾಜರಾತಿ ಕಡಿಮೆ ಆಗುತ್ತಿದ್ದು, ಶಾಲೆಗಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಶಾಲೆ ಆರಂಭದ ದಿನಗಳಲ್ಲಿ ಶೇ.95ರಷ್ಟಿದ್ದ ಹಾಜರಾತಿ ಕಳೆದ 8-10 ದಿನಗಳಲ್ಲಿ ಗಣನೀಯವಾಗಿ ಕುಸಿದಿದ್ದು, ಶುಕ್ರವಾರ ಹಾಜರಾತಿ ಪ್ರಮಾಣ ಶೇ.65ಕ್ಕೆ ಕುಸಿದಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಇದರ ಹೊರತಾಗಿಯೂ ಮಕ್ಕಳು ಮತ್ತು ಪಾಲಕರಲ್ಲಿ ಉಂಟಾಗಿರುವ ಭಯವನ್ನು ಹೋಗಲಾಡಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೂ ಸಹ ಪಾಲಕರು ಒಪ್ಪಿಗೆ ಸೂಚಿಸದಿರುವುದು ಶಿಕ್ಷಣ ಇಲಾಖೆಗೆ ನುಂಗಲಾರದ ತುತ್ತಾಗಿದೆ.

ಖಾಸಗಿ ಶಾಲೆಗಳದ್ದು ಲೆಕ್ಕಕ್ಕೆ ಸಿಗುತ್ತಿಲ್ಲ: ಒಂದೆಡೆ ಸರ್ಕಾರಿ ಶಾಲೆಗಳ ಮಾಹಿತಿ ಇಲಾಖೆ ದೊರೆಯುತ್ತಿದೆಯಾದರೂ ಖಾಸಗಿ ಶಾಲೆಗಳಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಇಲಾಖೆಗೆ ಸ್ಪಷ್ಟತೆ ಇಲ್ಲ. ಖಾಸಗಿ ಶಾಲೆಗಳಲ್ಲೂ ಮಕ್ಕಳಲ್ಲಿ ಕರೊನಾ ಪಾಸಿಟಿವ್ ಕಂಡು ಬಂದಿದ್ದರೂ ಇದರ ಮಾಹಿತಿಯನ್ನು ಶಾಲೆಗಳ ಆಡಳಿತ ಮಂಡಳಿ ಇಲಾಖೆಗೆ ನೀಡುತ್ತಿಲ್ಲ ಎನ್ನಲಾಗುತ್ತಿದೆ.

ಶಾಲೆ ಬಂದ್: ಇದರ ನಡುವೆ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಎಂಇಎಸ್ ಅನುದಾನಿತ ಪ್ರೌಢಶಾಲೆಯ 28 ವಿದ್ಯಾರ್ಥಿಗಳು ಮತ್ತು 6 ಶಿಕ್ಷಕರಿಗೆ ಭಾನುವಾರ ಕರೊನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಅಲ್ಲದೆ, ಶಾಲೆಯನ್ನು ಸುರಕ್ಷತಾ ದೃಷ್ಟಿಯಿಂದ ಒಂದ ವಾರ ಬಂದ್ ಮಾಡಲಾಗಿದ್ದು, ಆನ್‌ಲೈನ್ ತರಗತಿ ನಡೆಸುವಂತೆ ಕನಕಪುರ ಬಿಇಒ ಸೂಚಿಸಿದ್ದಾರೆ. ಇನ್ನು ಶುಕ್ರವಾರವೇ ರಾಮನಗರದ ಜಾನಪದ ಲೋಕದ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿನ್ 14 ವಿದ್ಯಾರ್ಥಿಗಳು ಸೇರಿ 20 ಮಂದಿಗೆ ಸೋಂಕು ತಗುಲಿರುವುದು ಧೃಢಪಟ್ಟಿದ್ದು ಕಾಲೇಜನ್ನು ಸೀಲ್‌ಡೌನ್ ಮಾಡಲಾಗಿದೆ.

ಹೆಚ್ಚಿನ ಗಮನಹರಿಸಬೇಕಿದೆ: ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೋಂಕಿಗೆ ಹೆಚ್ಚು ತುತ್ತಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಯ ಬಗ್ಗೆ ನಿಗಾವಹಿಸಬೇಕಿದೆ. ದಿನ ಕಳೆದಂತೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಶಾಲೆಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸೇಷನ್, ಥರ್ಮಲ್ ಸ್ಕಾೃನರ್ ಮೂಲಕ ಮಕ್ಕಳಲ್ಲಿ ಜ್ವರ ಪತ್ತೆಯಂತಹ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ.

ಠಾಣಾಧಿಕಾರಿಗೆ ಪಾಸಿಟಿವ್: ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣಾಧಿಕಾರಿ ರವಿಕುಮಾರ್‌ಗೆ ಕರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮೇಕೆದಾಟು ಅಣೆಕಟ್ಟೆ ಹೋರಾಟದ ಪಾದಯಾತ್ರೆಯು ಸಾತನೂರು ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದು ಇವರು ಹೆಚ್ಚಿನ ಜವಾಬ್ದಾರಿ ಹೊತ್ತುಕೊಂಡು ಕೆಲಸ ನಿರ್ವಹಿಸಿದ್ದರಿಂದ ಸೋಂಕು ತಗುಲಿರಬಹುದು ಎಂದು ತಿಳಿದುಬಂದಿದೆ.

ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರದ ಅಂತ್ಯಕ್ಕೆ 63 ಮಕ್ಕಳು 13 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಶಾಲೆಗಳಲ್ಲಿ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗುತ್ತಿದ್ದರೂ ಮಕ್ಕಳ ಹಾಜರಾತಿ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದೆ. | ಸೋಮಲಿಂಗಯ್ಯ, ಶಿಕ್ಷಣಾಧಿಕಾರಿ