ನರಗುಂದ: ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ದ್ವಿಚಕ್ರ ವಾಹನ, ಪೀಠೋಪಕರಣ ಸೇರಿ ವಿವಿಧ ದಾಖಲೆ ಪತ್ರಗಳು ಸುಟ್ಟು ಕರಕಲಾದ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ನಗರದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಡಿವೈಎಸ್ಪಿ ಕಚೇರಿ ಪಕ್ಕದ ಟಿವಿಎಸ್ ಶೋರೂಂ ವರ್ಕ್ ಶಾಪ್‌ನಲ್ಲಿದ್ದ ಯುಪಿಎಸ್ ಬ್ಯಾಟರಿಯಲ್ಲಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ಪರಿಣಾಮ ಕಂಪ್ಯೂಟರ್, 2 ದ್ವಿಚಕ್ರ ವಾಹನ, ರಿಪೇರಿಗೆ ಬಿಟ್ಟಿದ್ದ 17 ವಿವಿಧ ದ್ವಿಚಕ್ರ ವಾಹನ ಸೇರಿ 19 ದ್ವಿಚಕ್ರ ವಾಹನಗಳು, ಬಿಡಿಭಾಗಗಳು, ಆಯಿಲ್ ಮತ್ತು ವಿವಿಧ ಪೀಠೋಪಕರಣಗಳು ಸುಟ್ಟಿವೆ.
ಕಟ್ಟಡದ ಮೇಲ್ಮಹಡಿ ಕೊಠಡಿಗೂ ಬೆಂಕಿ ವ್ಯಾಪಿಸಿದ್ದರಿಂದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಕಾರ್ಯಪಾಲಕ ಇಂಜಿನಿಯರ್ ಕಚೇರಿಯ 5 ಕಂಪ್ಯೂಟರ್, 3 ಪ್ರಿಂಟರ್, ವಿವಿಧ ದಾಖಲೆ ಪತ್ರಗಳು ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ. ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿಯಿಂದ ಪಾರಾದ ಕಾವಲುಗಾರ: ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮೇಲಿನ ಮಹಡಿಯಲ್ಲಿದ್ದ ಕೆಆರ್‌ಐಡಿಎಲ್ ಕಚೇರಿಯ ಕಾವಲುಗಾರನಿಗೆ ಕೆಳಗಿಳಿದು ಬರಲು ಸಾಧ್ಯವಾಗದೆ ಕಟ್ಟಡದ ಹಿಂಬದಿಯಿಂದ ಕೆಳಗಿಳಿದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.