ನ್ಯೂಸ್

ಶಾರದಾವಿಲಾಸ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸ ಆಚರಣೆ

ನಗರದ ಶಾರದಾವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಮಾತನಾಡಿ, ದೇಶ ಪ್ರಗತಿ ಹೊಂದುತ್ತಿದ್ದರೆ ವಿಜ್ಞಾನದ ಮುನ್ನಡೆಯೇ ಕಾರಣ. ಇಂದು ನಾವು ವಿಜ್ಞಾನದಲ್ಲಿ ಅನೇಕ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿದು ಬಾಹ್ಯಾಕಾಶಗಳ ರಚನೆಯಲ್ಲಿ ಮುನ್ನಡೆಯನ್ನು ಸಾಧಿಸುತ್ತಿದ್ದೇವೆ. ಇದಕ್ಕೆ ವಿಜ್ಞಾನಿಗಳು ಹಾಗೂ ವಿಜ್ಞಾನದ ಹೊಸ ಹೊಸ ತಂತ್ರಜ್ಞಾನಗಳೇ ಕಾರಣ ಎಂದರು.

ಗಣತಂತ್ರ ವ್ಯವಸ್ಥೆಯಲ್ಲಿ ಸಂವಿಧಾನ ಒಂದರಿಂದಲೇ ಮಾತ್ರ ಸಮಾನತೆಯನ್ನು ಕಾಣಲು ಸಾಧ್ಯ. ಇದನ್ನು ನಾವೆಲ್ಲರೂ ಮೊದಲು ಅರಿಯಬೇಕೆಂದು ತಿಳಿಸಿ, ಸಮಾನತೆ ಮತ್ತು ಭಾತೃತ್ವ ಜಾತ್ಯತೀತ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

21 ನೇ ಶತಮಾನದಲ್ಲಿ ಆರ್ಥಿಕವಾಗಿ ದೇಶವು ಮುಂದುವರಿಬೇಕಾದರೆ ವಿಜ್ಞಾನಿಗಳ ಹೊಸ ಹೊಸ ಪ್ರಯೋಗಗಳು ಕೂಡ ಪ್ರಮುಖವಾದ ಅಂಶವಾಗುತ್ತದೆ. ಇಂದಿನ ಯುವ ಜನಾಂಗ ಸಂಪೂರ್ಣವಾಗಿ ಶಿಕ್ಷಣದಲ್ಲಿ ತೊಡಗಿಸಿಕೊಂಡಾಗ ಶೈಕ್ಷಣಿಕವಾಗಿಯೂ ಕೂಡ ಸಾಧಿಸಲು ಸಹಾಯಕವಾಗುತ್ತದೆ. ದೇಶದ ಭವಿಷ್ಯದಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾದುದ್ದು ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯ ಎಸ್.ಎಲ್.ರಾಮಚಂದ್ರ ಧ್ವಜರೋಹಣ ನೆರವೇರಿಸಿದರು. ಗೌರವ ಕಾರ್ಯದರ್ಶಿ ಆರ್.ದಿನೇಶ, ಸದಸ್ಯ ಆರ್.ನರಸಿಂಹ, ನಾಗೇಶ್ ಹನಸೋಗೆ ಇದ್ದರು. ಇದೇ ಸಂದರ್ಭದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಸಂಸ್ಥೆಗೆ ಕೀರ್ತಿ ತಂದ ಪ್ರತಿಭಾಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.