ಎನ್.ಆರ್.ಪುರ ತಾಪಂನಲ್ಲಿ ತಹಸೀಲ್ದಾರ್ ಡಾ. ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಿಎಸ್‌ಐ ಬಿ.ಎಸ್.ನಿರಂಜನ್ ಗೌಡ ಮಾತನಾಡಿದರು. ಎಚ್.ನವೀನ್‌ಕುಮಾರ್, ಆರ್.ವಿ.ಮಂಜುನಾಥ್ ಇದ್ದರು. 
ನ್ಯೂಸ್

ಶಾಂತಿಯುತವಾಗಿ ಹಬ್ಬ ಆಚರಿಸಿ

ಎನ್.ಆರ್.ಪುರ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಿ ಎಂದು ತಹಸೀಲ್ದಾರ್ ಡಾ.ನೂರುಲ್ ಹುದಾ ತಿಳಿಸಿದರು.

ತಾಪಂನಲ್ಲಿ ನಡೆದ ಹಬ್ಬಗಳ ಶಾಂತಿ ಸಭೆಯಲ್ಲಿ ಮಾತನಾಡಿ, ಹಬ್ಬಗಳು ಖುಷಿ ನೀಡಬೇಕೇ ಹೊರತು ಇನ್ನೊಬ್ಬರಿಗೆ ತೊಂದರೆಯಾಗಬಾರದು. ಎಲ್ಲರೂ ಸಹಕಾರ ನೀಡಿದರೆ ಮಾತ್ರ ಶಾಂತಿಯುತ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ. ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗದಲ್ಲಿ, ವಿಸರ್ಜನಾ ಸ್ಥಳಗಳಲ್ಲಿ, ಗಣೇಶನನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ವಿದ್ಯುತ್ ಸಮಸ್ಯೆ ಇದ್ದಲ್ಲಿ ಕೂಡಲೇ ಮೆಸ್ಕಾಂ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆನೆಗಳ ಸಂಚಾರ ಇರುವ ಬಗ್ಗೆ ಅರಣ್ಯ ಇಲಾಖೆ ಮೊದಲೇ ಗ್ರಾಪಂಗೆ ಮಾಹಿತಿ ನೀಡಬೇಕು. ಗ್ರಾಪಂ ಕಸವಿಲೇವಾರಿ ವಾಹನದಲ್ಲಿ ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ಪಿಡಿಒ ನೀಡಿಸಬೇಕು. ಗಣೇಶನನ್ನು ಪ್ರತಿಷ್ಠಾಪಿಸಿರುವ ಕಡೆ ಆನೆಗಳ ಸಂಚಾರ ಇದ್ದರೆ ವಿಸರ್ಜನಾ ಮೆರವಣಿಗೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಿಎಸ್‌ಐ ಬಿ.ಎಸ್.ನಿರಂಜನ್ ಗೌಡ ಮಾತನಾಡಿ, ಕಡ್ಡಾಯವಾಗಿ ಡಿಜೆ ನಿಷೇಧಿಸಲಾಗಿದೆ. ಹೆಚ್ಚುವರಿ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಹಾಸ್ಟೆಲ್, ಆಸ್ಪತ್ರೆ, ಕೋರ್ಟ್, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಬಳಿ ಇತರ ಧರ್ಮದವರ ಪ್ರಾರ್ಥನಾ ಮಂದಿರದ ಮುಂದೆ ಧ್ವನಿವರ್ಧಕ ಬಳಸಬಾರದು ಹಾಗೂ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗುವಂತಿಲ್ಲ ಎಂದು ತಿಳಿಸಿದರು.

ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 126 ಕಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಏಕಗವಾಕ್ಷಿ ಕೇಂದ್ರ ಸ್ಥಾಪಿಸಿದ್ದು, ಶೇ.90ರಷ್ಟು ಅನುಮತಿ ನೀಡಲಾಗಿದೆ. ವಿಸರ್ಜನಾ ಸ್ಥಳದಲ್ಲಿ ಗ್ರಾಪಂನಿಂದ ಎಚ್ಚರಿಕೆ ಲಕ ಅಳವಡಿಸಬೇಕು. ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ಬಂಟಿಂಗ್ಸ್, ಬ್ಯಾನರ್ಸ್‌ ಅಳವಡಿಸಬೇಕು ಎಂದು ತಿಳಿಸಿದರು.

ಜಾಮಿಯಾ ಮಸೀದಿ ಮುಖ್ಯಸ್ಥ ಸೈಯದ್ ಸಾದಿಕ್ ಪಾಷಾ ಮಾತನಾಡಿ, ಈದ್ ಮಿಲಾದ್ ಹಬ್ಬದ ದಿನದಂದು ಯಾವುದೇ ಮೆರವಣಿಗೆ ಮಾಡುವುದಿಲ್ಲ. ಮಸೀದಿಗಳಲ್ಲಿ ಧರ್ಮಗುರುಗಳಿಂದ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ವಿವಿಧ ಗಣೇಶೋತ್ಸವ ಸಮಿತಿ ಪದಾಕಾಧಿರಿಗಳು ಹಾಗೂ ಮುಸ್ಲಿಂ ಮುಖಂಡರು, ಪಿಡಿಒಗಳು ಇದ್ದರು.