ನ್ಯೂಸ್

ಶಾಂತಿ ಸಂದೇಶ ಸಾರಿದ ದಾಸಿಮಯ್ಯ

ಚಿತ್ರದುರ್ಗ: ಶಾಂತಿ ಹಾಗೂ ಪ್ರೀತಿ ಸಂದೇಶ ಸಾರಿದ ದೇವರ ದಾಸಿಮಯ್ಯ ನಮ್ಮೆಲ್ಲರ ಬದುಕಿಗೆ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ ಜಯಂತಿ ಆಚರಣೆಯಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದರು.
ವಚನಗಳಿಂದ ಸಮಾಜದ ಅಂಕು-ಡೊಂಕು ತಿದ್ದಿದ ದಾಸಿಮಯ್ಯ ನೇರ ನಿಷ್ಠುರಿಯಾಗಿದ್ದರು. ಸಮಾಜದ ಪ್ರತಿಯೊಬ್ಬರ ಒಳಿತು ಬಯಸಿದ್ದವರು. ನಡೆ-ನುಡಿ ಒಂದಾಗಿ ಬಾಳಿದ ಅವರು ಬಸವಾದಿ ಶಿವ ಶರಣರಿಗೆ ಮಾದರಿಯಾಗಿದ್ದರು. ದಾಸಿಮಯ್ಯ ಅವರನ್ನು ಆದ್ಯ ವಚನಕಾರ ಎಂದು ಶಿವಶರಣರು ಭಾವಿಸಿದ್ದರು. ನೇಕಾರ ಕಾಯಕದ ದಾಸಿಮಯ್ಯ ಮೂಢನಂಬಿಕೆ ವಿರೋಧಿಸಿದ್ದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಾಡಗೀತೆ, ದೇವರ ದಾಸಿಮಯ್ಯನವರ ವಚನ ಹಾಡುವುದರೊಂದಿಗೆ ಕಾರ‌್ಯಕ್ರಮ ನಿರೂಪಿಸಿದರು.
ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಸುರೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಅಧೀಕ್ಷ ಹೇಮಂತ್‌ಕುಮಾರ್,ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇತರರಿದ್ದರು.