ತಿ.ನರಸೀಪುರ: ಶರಣ ಸಾಹಿತ್ಯ ಸಾರ್ವಕಾಲಿಕವಾಗಿದ್ದು ಇಂದಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಮತ್ತು ಬದುಕು ಕಟ್ಟಿಕೊಳ್ಳಲು ಅವಶ್ಯವಾದ ವಿಚಾರಧಾರೆ ಇದರಲ್ಲಿದೆ. ಈ ಸಾಹಿತ್ಯವನ್ನು ಜನತೆಗೆ ಮುಟ್ಟಿಸುವ ಕೆಲಸವಾಗಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಹೇಳಿದರು.
ಜಿಲ್ಲಾ ಹಾಗೂ ತಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಪಟ್ಟಣದ ಮಹದೇವಪ್ಪ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳ ಸಾರದಲ್ಲಿಯೇ ನಮ್ಮ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಿದೆ. ಬದುಕಿನ ಸಾರ ಅಡಗಿದ್ದು ಅದನ್ನು ಅರಿತು ನಡೆದರೆ ಮುಂದಿನ ಪೀಳಿಗೆಗೆ ಶರಣರ ವಚನಗಳನ್ನು ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಶರಣ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ವಾಟಾಳು ಶ್ರೀಗಳು ಒಂದು ಲಕ್ಷ ರೂ.ದತ್ತಿ ನೀಡಿದ್ದು ಇತರರು ಹೆಚ್ಚಿನ ದತ್ತಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಬಸವಣ್ಣ ಮಾನವ ಧರ್ಮವನ್ನು ಸಂರಕ್ಷಣೆ ಮಾಡಿದ ಮಹಾಪುರುಷ. 12ನೇ ಶತಮಾನದಲ್ಲಿ ವಚನ ಕ್ರಾಂತಿಯಿಂದ ಸಾಮಾಜಿಕ ಪರಿವರ್ತನೆ ಆಗಿದ್ದು ಈಗ ಮತ್ತೆ 21ನೇ ಶತಮಾನದಲ್ಲಿ ಪರಿವರ್ತನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಲಾಗಿದೆ ಎಂದರು.
ವೈದ್ಯ ಡಾ.ಎನ್.ಬಸವಣ್ಣ, ಚಾಮರಾಜನಗರ ಮತ್ತು ಮೈಸೂರು ನೀರು ಬಳಕೆದಾರರ ಮಹಾಮಂಡಳಿ ಅಧ್ಯಕ್ಷ ಚೌಹಳ್ಳಿ ಮಹದೇವಪ್ಪ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುಟ್ಟಬುದ್ಧಿ ಅವರನ್ನು ಸನ್ಮಾನಿಸಲಾಯಿತು.
ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಡಾ.ಸಿದ್ದಪ್ಪ, ಮಂಡ್ಯ ಮಹಿಳಾ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಕುಮಾರ್ ಬೆಳಲೆ, ಕಾರ್ಯಕಾರಿ ಸಮಿತಿ ಸದಸ್ಯ ಎಂ.ಸಿದ್ದಲಿಂಗಸ್ವಾಮಿ, ವೀರಶೈವ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಎಸ್.ಶಾಂತರಾಜು, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ತೊಂಟೇಶ್, ನೆರಗ್ಯಾತನಹಳ್ಳಿ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ, ಕುರುಬೂರು ಶಿವು, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ನಾಗೇಶ್, ಸಾಲೂರು ಸ್ವಾಮಿ, ದಯಾನಂದ ಪಟೇಲ್, ಜ್ಞಾನೇಂದ್ರ ಮೂರ್ತಿ, ಕೆಬ್ಬೇಹುಂಡಿ ಶಿವಕುಮಾರ್, ಕುರುಬೂರು ಶಿವು, ಮೋಹನ್, ಹೆಳವರಹುಂಡಿ ಮೂರ್ತಿ ಭಾಗವಹಿಸಿದ್ದರು. ಇದೇ ವೇಳೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.