ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ ಆಯೋಜಿಸಿರುವ 2 ದಿನಗಳ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಂಬಳ-ಗದಗ ಶ್ರೀ ತೋಂಟದಾರ್ಯ ಮಠದ ಡಾ. ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಮತ್ತಿತರ ಪೂಜ್ಯರ ಸಾನ್ನಿಧ್ಯದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು 1986ರಲ್ಲಿ ಪರಿಷತ್ತನ್ನು ಸ್ಥಾಪಿಸಿದರು. ಕಳೆದ ನಾಲ್ಕೈದು ದಶಕಗಳಿಂದ ಬಸವಾದಿ ಶರಣರ ತತ್ವಗಳನ್ನು ನಾಡಿನ ಮೂಲೆ ಮೂಲೆಗಳಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಲುಪಿಸುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು.
ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕನೆಂದು ಘೋಷಿಸಿ ಇಂದಿಗೆ ಒಂದು ವರ್ಷವಾಯಿತು. ಸಿಎಂ ಸಿದ್ದರಾಮಯ್ಯ ಬಸವಾದಿ ಶರಣರ ಆಚರಣೆ, ತತ್ವಾದರ್ಶಗಳು ಸಿದ್ಧಾಂತದಲ್ಲಿ ನಂಬಿಕೆ, ಬದ್ಧತೆ ಇಟ್ಟುಕೊಂಡಿದ್ದಾರೆ ಎಂದರು.
ಸಮ್ಮೇಳನಾಧ್ಯಕ್ಷ ಡಾ. ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ಇಂದು ಧರ್ಮ, ದೇವರ ಹೆಸರಲ್ಲಿ ಮಾನವ ಪ್ರತ್ಯೇಕತೆ ಗಟ್ಟಿಗೊಳ್ಳುತ್ತಿದೆ. ಮನುಷ್ಯರ ನಡುವೆ ಧ್ವೇಷಾಸೂಯೆ,ಹಿಂಸೆ, ಶೋಷಣೆಗಳು ಬಲಗೊಳ್ಳುತ್ತಿವೆ. ಇದರಿಂದ ದೇಶ ಮುಂದೊಂದು ದಿನ ತುಂಡು, ತುಂಡಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಧರ್ಮಾಂಧತೆ ಬೆಳಸದೇ, ಧರ್ಮವೆಂದರೆ ದಯೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಎಂಬ ಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ. ಶರಣರ ಮೂಲ ತತ್ವಜ್ಞಾನದ ಅರಿವು ಮಾನವರೆಲ್ಲರೂ ಒಂದೇ ಎಂಬ ಭಾವ ಬೆಳೆಯಲು, ಏಕತೆ, ಸಾಮರಸ್ಯ ಮೂಡಿಸಲು ಸಾಧ್ಯವಾಗಲಿದೆ. ಮಾನವ ಕುಲಕೋಟಿ ರಕ್ಷಣೆಗೆ ಸಾವಿರಾರು ಸತ್ಯ ಶರಣರ ಬಲಿದಾನವಾಗಿದೆ. ಶರಣ ಸಾಹಿತ್ಯ ಯಾವುದೇ ಸಮುದಾಯದ ಸ್ವತ್ತಲ್ಲ. 300 ವರ್ಷ ಅಜ್ಞಾತವಾಗಿದ್ದ ಅಳಿದುಳಿದ ಶರಣ ಸಾಹಿತ್ಯವಿಂದು ನಮಗೆ ಅಲ್ಪವಾದರೂ ದೊರಕಿದೆ. ಆದರೆ, ಅದರಲ್ಲಿ ಬೆರೆತಿರುವ ಕೆಲವು ಹುಸಿ ಕಲ್ಪನೆಗಳನ್ನು ಸರಿಪಡಿಸಿ, ಪರಿಶುದ್ಧ ಶರಣ ಸಾಹಿತ್ಯವನ್ನು ಜನರಿಗೆ ತಲುಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಗತ್ತಿನ ಸಾಮಾಜಿಕ, ಆರ್ಥಿಕ ಅಸಮಾನತೆ ಅಳಿಸುವ ಸಾಮರ್ಥ್ಯ ಶರಣ ಸಾಹಿತ್ಯಕ್ಕೆ ಇದೆ. ಬಸವಾದಿ ಶರಣರು ಮಾನವ ಹಕ್ಕುಗಳ ಮೊದಲ ರಕ್ಷಕರಾಗಿದ್ದಾರೆ. ಅತ್ಯುನ್ನತ ಅನುಭವವುಳ್ಳ ಶರಣ ಸಾಹಿತ್ಯ ಸರ್ವ ಶ್ರೇಷ್ಠವಾಗಿದೆ. ಇದರಲ್ಲಿ ಪರಿಪೂರ್ಣ ಶಿವಯೋಗವಿದೆ. ಸ್ವಾನುಭವದ ವಚನಗಳೆಂಬ ಶರಣ ಸಾಹಿತ್ಯ ಸ್ವತಂತ್ರವಾಗಿದೆ ಎಂದರು.
ಧಾರವಾಡದ ಕರ್ನಾಟಕ ವಿವಿ 1969ರಲ್ಲಿ ಪ್ರಕಟಿಸಿದ ವಚನ ಸಂಪುಟ ಪುನರ್ ಮುದ್ರಣ, ಅದೇ ವಿವಿಯಲ್ಲಿ ಡಿಜಿಟಲೀಕರಣವಾಗುತ್ತಿರುವ ವಚನ ತಾಡೋಲೆ ಪ್ರಕರಣ, ಸಮಾನತೆ, ಶಾಂತಿ ಸಾರುವ ವಚನ ಶರಣ ಸಾಹಿತ್ಯ, ಸಾರ್ವತ್ರಿಕ, ಜಾಗತಿಕ ಮೌಲ್ಯವೆಂದು ಘೋಷಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕದಿಂದ ಸ್ನಾತಕೋತ್ತರದವರೆಗೆ ಶರಣ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸಬೇಕು. ವಚನ ವಿವಿ ಸ್ಥಾಪಿಸಬೇಕು ಹಾಗೂ ಬಸವ ಕಲ್ಯಾಣದ ಅನುಭವ ಮಂಟಪ ನಿರ್ಮಾಣ ಕಾಮಗಾರಿಯನ್ನು ತ್ವರಿತ ಪೂರ್ಣಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸುತ್ತೂರು ಕ್ಷೇತ್ರದಿಂದ ಶರಣ ಸಾಹಿತ್ಯವೆಂಬ ಈ ರಥವನ್ನು ಶೂನ್ಯಪೀಠವಿರುವ ಚಿತ್ರದುರ್ಗದವರೆಗೂ ಸುತ್ತೂರು ಶ್ರೀಗಳು ಎಳೆದುಕೊಂಡು ಬಂದಿದ್ದಾರೆ. ಈ ರಥ ನಾಡು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಗಲಿ ಎಂದರು.
ಶೋಷಿತ ಸಮುದಾಯಗಳಿಗೆ ಸಮಾನತೆ ನೀಡಿದ ಅನುಭವ ಮಂಟಪದ ಪರಿಕಲ್ಪನೆಯ ಚರ್ಚೆಗೆ ಈ ಸಮೇಳನ ಮುಖ್ಯ ವೇದಿಕೆಯಾಗಲಿ. ಶೋಷಿತ ಸಮುದಾಗಳಿಗೂ ಮಠ ಮಾನ್ಯಗಳಿರಬೇಕೆಂಬ ಪರಿಕಲ್ಪನೆ ಬಸವಾದಿ ಶರಣರಿಂದ ದೊರಕಿದೆ. ಬಸವಣ್ಣನವರ ವಿಚಾರಗಳು ಎಲ್ಲೆಡೆ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಎಸ್.ಆರ್. ಗುಂಜಾಳ ಮಾತನಾಡಿ, ಶರಣ ತತ್ವಗಳು, ಸಂದೇಶಗಳು ಸಮಾಜಕ್ಕೆ ಈ ಸಮ್ಮೇಳನದ ಮೂಲಕ ತಲುಪುವಂತಾಗಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋ ಮಶೇಖರ್, ಶೋಷಣೆ, ಅಂಧಶ್ರದ್ಧೆ ವಿರುದ್ಧ ವೈಚಾರಿಕ ಪ್ರಜ್ಞೆ, ವಿವೇಕದ ಜಾಗೃತಿಗೆ ಶರಣ ಸಾಹಿತ್ಯ ನೆರವಾಗಲಿದೆ. ಇದು ರೋಚಕ ಕಥಾನಕವಲ್ಲ. ಈ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸಬೇಕು. ದಾವಣಗೆರೆ ವಿವಿಗೆ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಹೆಸರಿಡಬೇಕು ಎಂದರು.
ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಯೋಗಗುರು ಚನ್ನಬಸವಣ್ಣ,ನಾಡೋಜ ಗೊ.ರು. ಚನ್ನಬಸಪ್ಪ, ಎಂಎಲ್‌ಸಿ ಕೆ.ಎಸ್. ನವೀನ್, ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್, ಮಾಜಿ ಸಚಿವ ಎಸ್.ಎನ್.ಪಾಟೀಲ್, ಅಪ್ಪಾರಾವ್ ಅಕ್ಕೋಣಿ, ತಹಸೀಲ್ದಾರ್ ಡಾ.ನಾಗವೇಣಿ ಮತ್ತಿತರ ಗಣ್ಯರು, ಹರಗುರು ಚರಮೂರ್ತಿಗಳು ಇದ್ದರು. ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ. ವೀರೇಶ್ ಸ್ವಾಗತಿಸಿದರು.
ನಾಟ್ಯರಂಜನಿ ನೃತ್ಯಕಲಾಕೇಂದ್ರದ ಡಾ. ನಂದಿನಿ ಶಿವಪ್ರಕಾಶ್, ಚಿತ್ರ ತಂಡ ಕಲಾಕೇಂದ್ರದವರು ವಚನ ರೂಪಕ, ಶ್ರೀ ತೋಟಪ್ಪ ಉತ್ತಂಗಿ, ಕೋಕಿಲ ರುದ್ರಮೂರ್ತಿ ವಚನ ಸಂಗೀತ, ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದವರಿಂದ ಸಾಮೂಹಿಕ ವಚನ ಗಾಯನ ಹಾಗೂ ಗಾಯತ್ರಿ ತಂಡದವರು ವೀಣಾವಾದನ ನಡೆಸಿಕೊಟ್ಟರು.