ರಿಪ್ಪನ್‌ಪೇಟೆ: ಸರ್ವಜನಾಂಗದ ಕಲ್ಯಾಣಕ್ಕಾಗಿ ರೂಪಿತಗೊಂಡ ಬಸವಣ್ಣ ಅವರ ಆಡಳಿತಾತ್ಮಕ ವ್ಯವಸ್ಥೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅನುಸರಿಸಿಕೊಂಡು ಬಂದಿದ್ದು ಸಮಾಜದಲ್ಲಿನ ಸಮಾನತೆಗೆ ದಾರಿದೀಪವಾಗಿದೆ ಎಂದು ಸಾಹಿತಿ ಹಬೀಬ್ ಹೇಳಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಕ್ತವೃಂದ ಆಯೋಜಿಸಿದ್ದ ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿ, ಮತ, ಪಂಥಗಳನ್ನೆಣಿಸದೆ ಸರ್ವರ ಹಿತ ಬಯಸಿ ಅನ್ನ, ಅಕ್ಷರ, ಆರೋಗ್ಯ ದಾಸೋಹ ನೀಡಿದ ಕಾರ್ಯ ಅವಿಸ್ಮರಣೀಯ ಎಂದರು.
ಶ್ರೀಗಳು ಮಾಡಿದ ಕಾರ್ಯಗಳ ಗುಣಗಾನವೇ ನಮ್ಮೆಲ್ಲರ ಭಾಗ್ಯ. ಅವರು ನಡೆದ ದಾರಿಯಲ್ಲಿ ಸಾಗುವುದೇ ನಾವು ಮಾಡಬೇಕಿರುವ ಕಾರ್ಯ. ಶ್ರೀಗಳ ಸಿದ್ಧಾಂತದತ್ತ ನಾವೆಲ್ಲರೂ ಹೆಜ್ಜೆ ಹಾಕುವ ಮೂಲಕ ಸಾಮರಸ್ಯ ಸಮಾಜ ನಿರ್ಮಿಸೋಣ ಎಂದರು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯ ಮಲ್ಲಿಕಾರ್ಜುನ, ಅಖಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಉಮೇಶ ಗೌಡ, ಮುಖಂಡರಾದ ತ.ಮ.ನರಸಿಂಹ, ಎಂ.ವೈ.ನಾಗರಾಜ, ಕಗ್ಗಲಿ ಲಿಂಗಪ್ಪ, ಸತೀಶ, ಲೀಲಾ ಶಂಕರ್, ಸೋಮಶೇಖರ, ರವೀಂದ್ರ, ಈಶ್ವರಪ್ಪ ಗೌಡ, ಶೀಲಾ, ಟಿ.ಆರ್.ಕೃಷ್ಣಪ್ಪ, ಗಣೇಶ್ ಕೆಂಚನಾಲ ಇತರರಿದ್ದರು.