ರಾಮನಗರ: ಕರೊನಾ ಮಹಾಮಾರಿ ವಿರುದ್ಧದ ಲಸಿಕೆ ಅಭಿಯಾನ ಒಂದು ವರ್ಷ ಪೂರೈಸಿದ್ದು, ರಾಮನಗರ ಜಿಲ್ಲೆ ಲಸಿಕೆ ನೀಡಿಕೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
2021ರ ಜ.16ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ಕರೊನಾ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಜಿಲ್ಲೆಯಲ್ಲಿಯೂ ಕಳೆದ ವರ್ಷ ಇದೇ ದಿನ ಚಾಲನೆ ದೊರೆತಿತ್ತು.
ಎಷ್ಟು ಡೋಸ್‌ಗಳು: ಅಂದಿನ ಶ್ರಮ ಇಂದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಜಿಲ್ಲೆಯಲ್ಲಿ ಮೊದಲ ಡೋಸ್ ನೀಡಿಕೆಯಲ್ಲಿ ಶೇ.99 ಸಾಧನೆಯಾಗಿದೆ. ಎರಡನೇ ಡೋಸ್ ಶೇ.93 ಸಾಧನೆ ಮಾಡಿದೆ. ಅಂದು ಎರಡು ಖಾಸಗಿ ಆಸ್ಪತ್ರೆಗಳು ಸೇರಿ ಏಕಕಾಲದಲ್ಲಿ 75 ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಇದಾದ ಬಳಿಕ 65 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಶುರು ಮಾಡಲಾಯಿತು. ಈ ವೇಳೆಗಾಗಲೇ ಜನತೆಯಲ್ಲಿ ಲಸಿಕೆಯ ವಿರುದ್ಧ ಅನುಮಾನಗಳ ಕಾರಣದಿಂದಾಗಿ ಜನತೆ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಬರಲೇ ಇಲ್ಲ.
ಜಿಲ್ಲಾಡಳಿತ ಅಂದು ಆರಂಭದಲ್ಲಿ ಪ್ರತಿ ಆರೋಗ್ಯ ಕೇಂದ್ರದಲ್ಲಿಯೂ ಗರಿಷ್ಠ 100 ಕೋವಿಡ್ ಡೋಸ್ ನೀಡಲು ಮುಂದಾಗಿತ್ತು. ವ್ಯಾಕ್ಸಿನ್ ಕುರಿತು ಜಿಲ್ಲೆಯ ಜನತೆಯಲ್ಲಿನ ಅನುಮಾನ, ಗೊಂದಲ ಹಾಗೂ ಭಯದ ಕಾರಣ ಪ್ರತಿ ನಿತ್ಯ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇದರ ಹೊರತಾಗಿಯೂ ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ವಿಶೇಷ ಅಭಿಯಾನವನ್ನು ಆರಂಭಿಸಿ ಮೊದಲ ಹಂತದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು.
ಎರಡನೆ ಅಲೆಯಲ್ಲಿ ಯುವ ಸಮೂಹವೇ ಕರೊನಾ ಹೆಮ್ಮಾರಿಗೆ ಬಲಿಯಾಗುತ್ತಿತ್ತು. ಇದನ್ನು ಗಮನಿಸಿದ್ದ ಸಾರ್ವಜನಿಕರು ನಿಧಾನವಾಗಿ ಲಸಿಕೆ ಪಡೆದುಕೊಳ್ಳಲು ಮುಂದಾದರು. ಹಾಗಾಗಿ ಇಡೀ ಜಿಲ್ಲೆಯಲ್ಲಿ ಲಸಿಕೆಗೆ ಎಲ್ಲಿಲ್ಲದ ಬೇಡಿಕೆ ಬಂದಿತು. ಸರತಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್ ಪಡೆದುಕೊಳ್ಳಲು ಜನತೆ ಮುಗಿಬಿದ್ದರು.
ಅಧಿಕಾರಿಗಳ ಶ್ರಮ: ಮೊದ ಮೊದಲು ಜನತೆಯಲ್ಲಿ ಲಸಿಕೆ ಕುರಿತು ಜಾಗತಿ ಮೂಡಿಸುವ ಸಲುವಾಗಿ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕಿದ್ದರು. ಅದರಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ, ಒಂದೆಡೆ, ಕರೊನಾ ನಿಯಂತ್ರಣ, ಔಷೋಧೋಪಚಾರ. ಇನ್ನೊಂದೆಡೆ ಲಸಿಕೆ ನೀಡುವ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದರು
ಸಾಕಷ್ಟು ಏಳು ಬೀಳುಗಳ ನಡುವೆ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಸಲಿಕೆ ನೀಡಿಕೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳಿಂದ ತಳ ಹಂತದ ಸಿಬ್ಬಂದಿಯ ಅವಿರತ ಶ್ರಮದ ಲವಾಗಿ ಲಸಿಕೆಯನ್ನು ಜಿಲ್ಲೆಯ ಜನತೆ ನೀಡಲಾಗಿದೆ. ಎಲ್ಲರಿಗೂ ಧನ್ಯವಾದಗಳು. ಡಾ.ಪದ್ಮಾ, ಆರ್‌ಸಿಎಚ್ ಅಧಿಕಾರಿ, ರಾಮನಗರ