ಕೋಲಾರ: ಹೆರಿಗೆಯ ಬಳಿಕ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಂಬಂಧಿಕರು ಹಾಗೂ ಸಂಘಟನೆಗಳ ಮುಖಂಡರು ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ಪೂಜಾರಹಳ್ಳಿಯ ದಿವ್ಯಾ (22) ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಸಂಬಂಧಪಟ್ಟ ವೈದ್ಯರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಜತೆಗೆ ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು.
ಡಿ.7ರಂದು ಹೆರಿಗೆಗಾಗಿ ದಿವ್ಯಾಳನ್ನು ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದರಾದರೂ ತೀವ್ರ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು 32 ಬಾಟಲಿ ರಕ್ತ ಪಡೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 2 ಗಂಟೆಯೂ ರೋಗಿಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳದೆ ನಿರ್ಲಕ್ಷಿಸಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡದೆ ನಗರ ಹೊರವಲಯದ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಡಿ.9ರ ಬೆಳಗಿನ ಜಾವ ದಿವ್ಯಾ ಮೃತಪಟ್ಟಿದ್ದಾರೆ ಎಂದು ದಿವ್ಯಾ ಸಂಬಂಧಿಕರು ದೂರಿದರು.
ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಮತ್ತು ಸಿಬ್ಬಂದಿ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದಲೇ ದಿವ್ಯಾ ಮೃತಪಟ್ಟಿದ್ದು, ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಯನ್ನು ವಜಾಗೊಳಿಸಿ ಪ್ರಕರಣ ದಾಖಲಿಸಬೇಕು. ವೈದ್ಯರ ಪರವಾನಗಿ ರದ್ದುಪಡಿಸಲು ವೈದ್ಯಕೀಯ ಪರಿಷತ್‌ಗೆ ದೂರು ನೀಡಬೇಕು. ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವ ಜತೆಗೆ ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಪಟ್ಟುಹಿಡಿದರಾದರೂ ವಿಧಾನಪರಿಷತ್ ಚುನಾವಣೆ ಕಾರ್ಯದಲ್ಲಿದ್ದ ಹಿನ್ನೆಲೆಯಲ್ಲಿ ಡಿಎಚ್‌ಒ ಡಾ. ಎಂ.ಜಗದೀಶ್ ಹಾಗೂ ಡಿವೈಎಸ್ಪಿ ವಿ.ಎಲ್.ರಮೇಶ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು.
ಮೃತಳ ಪತಿ ಸುರೇಶ್, ದಲಿತಪರ ಸಂಘಟನೆಗಳ ಮುಖಂಡರಾದ ಸೂಲಿಕುಂಟೆ ರಮೇಶ್, ನಾಗನಾಳ ಮುನಿಯಪ್ಪ, ತಿಪ್ಪಸಂದ್ರ ಶ್ರೀನಿವಾಸ್, ಪಿ.ಎನ್.ರಮೇಶ್, ಮುದುವತ್ತಿ ಕೇಶವ, ಜನವಾದಿ ಮಹಿಳಾ ಸಂಘಟನೆಯ ವಿಜಯಕುಮಾರಿ ಇತರರು ಇದ್ದರು.