ನ್ಯೂಸ್

ವೈದ್ಯಕೀಯದಲ್ಲಿ ಆಯುರ್ವೇದಕ್ಕೆ 2ನೇ ಸ್ಥಾನ

ಬಾಗಲಕೋಟೆ: ಬದಲಾದ ವೈದ್ಯಕೀಯ ವಿಧಾನಗಳಲ್ಲಿ ಆಯುರ್ವೇದ ಪದ್ಧತಿಯು ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ ಎಂದು ಡಾ. ಗಜಾನನ್ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ಬಿಎಎಂಎಸ್ ಹಾಗೂ ಬಿಎಸ್ಸಿ ನರ್ಸಿಂಗ್  ವಿದ್ಯಾರ್ಥಿಗಳ ಆರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಆರ್ ಜಿ ಯು ಎಚ್ ಎಸ್ ನ ಸಿಂಡಿಕೇಟ್ ಸದಸ್ಯರಾದ ಡಾ. ಗಜಾನನ್ ಹೆಗಡೆಯವರು ವಿದ್ಯಾರ್ಥಿಗಳು ವೈದ್ಯ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ಯಶಸ್ಸನ್ನ ಸಾಧಿಸಬಹುದೆಂದರು.

ಮಾಧುರಿ ಮುಧೋಳ ಮಾತನಾಡುತ್ತಾ ವೈದ್ಯಕೀಯ ವಿದ್ಯಾರ್ಥಿಗಳು ಸಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ಸಾಹದ ಕಲಿಕೆ ಸಾಧ್ಯವಾಗುತ್ತದೆ ಎಂದರು.

ವಾರ್ಷಿಕ ಸಮಾರಂಭದಲ್ಲಿ ಶಿವಾಜಿ ಮಹಾರಾಜರ ಜೀವನ ಆಧಾರಿತ ನಾಟಕ, ಪ್ರಭು ಶ್ರೀ ರಾಮನ  ಹಾಡುಗಳ ಹೆಜ್ಜೆ ಕುಣಿತ, ವಿಭಿನ್ನ ರೀತಿಯ ಪ್ರಾದೇಶಿಕ ನೃತ್ಯ ಕಲೆಗಳು ಸೇರಿದ್ದ ಜನಸ್ತೋಮವನ್ನು  ಕೇಕೆ ಚಪ್ಪಾಳೆ ಹೊಡೆಯುವಂತೆ ಮಾಡಿದವು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಲ್ಹಾದ್ ಗಂಗಾವತಿ ಡೀನ್ / ಆಡಳಿತ ಅಧಿಕಾರಿ ಶಿವಕುಮಾರ್ ಗಂಗಾಲ್, ಟಿ ಐ ಆರ್ ಎಸ್ ನ ಪ್ರಾಂಶುಪಾಲರಾದ ಸಚಿನ್ ಬಾತ್ರ, ತೇಜಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶಶಾಂಕ್ ದೀಕ್ಷಿತ್ ಹಾಗೂ ಬಿಎಎಂಎಸ್‌ನ ಪ್ರಾಧ್ಯಾಪಕ ವರ್ಗ ಹಾಗೂ ಬಿ ಎಸ್ ಸಿ ನರ್ಸಿಂಗ್ ನ ಪ್ರಾಧ್ಯಾಪಕ ವರ್ಗದವರು ಹಾಗೂ ಸಂಸ್ಥೆಯ ಎಲ್ಲ ವಿದ್ಯಾರ್ಥಿ ವರ್ಗದವರು ಹಾಜರಿದ್ದರು. ಡಾ. ಶಿವಕುಮಾರ್ ಗಂಗಾಲ್ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಡಾ. ವಿಜಯಕುಮಾರ್ ಚವಡಿ ಹಾಗೂ ಡಾ. ರಜನಿ ದಡೇದ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ವೆಂಕಟೇಶ್ ಗೌಡರ್ ಅತಿಥಿಗಳನ್ನ ಸ್ವಾಗತಿಸಿದರು. ಡಾ. ಈಶ್ವರ್ ಪಾಟೀಲ್ ಅತಿಥಿಗಳನ್ನು ಪರಿಚಯಿಸಿದರು. ಡಾ. ದೀಪಾ ಗಂಗಾಲ್ ವಂದಿಸಿದರು