ಸೊರಬದಲ್ಲಿ ಹಮ್ಮಿಕೊಂಡ ಭಗವದ್ಗೀತಾ ಪ್ರಶಿಕ್ಷಣ ಶಿಬಿರವನ್ನು ವಿದ್ವಾನ್ ವೆಂಕಟರಮಣ ಟಿ. ಭಟ್ ಉದ್ಘಾಟಿಸಿದರು.ಜಿ.ವಿ. ಹೆಗಡೆ, ಮ.ಸ. ನಂಜುಂಡ ಸ್ವಾಮಿ ಇತರರಿದ್ದರು.  
ನ್ಯೂಸ್

ವೈಜ್ಞಾನಿಕ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಪರಿಹಾರ

ಸೊರಬ: ಭಗವದ್ಗೀತೆ ಧರ್ಮದ ಬಗ್ಗೆ ಮಾತ್ರವಲ್ಲ, ನಕಾರಾತ್ಮಕ ಶಕ್ತಿಗಳಿಂದ ದೂರವಿದ್ದು ಉತ್ತಮ ಜೀವನ ಪದ್ಧತಿಯ ಕುರಿತು ತಿಳಿಸುವ ಜತೆಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಭಗವದ್ಗೀತಾ ಅಭಿಯಾನದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಜೆ.ಲಕ್ಷ್ಮೀನಾರಾಯಣ ಹೇಳಿದರು.

ಶನಿವಾರ ಪಟ್ಟಣದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನಯಿಂದ ಹಮ್ಮಿಕೊಂಡ ಭಗವದ್ಗೀತಾ ಪ್ರಶಿಕ್ಷಣ ಶಿಬಿರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ಭಗವದ್ಗೀತೆಯ ಶ್ಲೋಕಗಳನ್ನು ಪಠಣ ಮಾಡಿ ಅದರ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಸಮಸ್ಯೆಗಳಿಗೂ ಭಗವದ್ಗಿತೆಯಲ್ಲಿ ಪರಿಹಾರವಿದೆ. ಭಗವದ್ಗಿತೆಯ ಅಧ್ಯಯನದಿಂದ ಆಧ್ಯಾತ್ಮಿಕವಾಗಿಯೂ ನೆಮ್ಮದಿ ದೊರೆಯುತ್ತದೆ. ಪ್ರಸಕ್ತ ವರ್ಷ 11ನೇ ಅಧ್ಯಾಯದ ಶ್ಲೋಕಗಳನ್ನು ಮಕ್ಕಳು, ಮಹಿಳೆಯರು ಸೇರಿದಂತೆ ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಐದನೇ ತರಗತಿಯಿಂದ ದ್ವಿತೀಯ ಪಿಯುವರೆಗಿನ ವಿದ್ಯಾರ್ಥಿಗಳಿಗೆ ಭಗವದ್ಗಿತೆಯ ವಿಶ್ವ ರೂಪ ಯೋಗದ ಕುರಿತು ತಿಳಿಸಲಾಗುವುದು. ನಂತರ ಸ್ಪರ್ಧೆಗಳನ್ನು ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿವಿಧ ವಿಭಾಗಗಳಲ್ಲಿ ಏರ್ಪಡಿಸಲಾಗುವುದು. ಇದರ ಸದುಪಯೋಗ ಪಡೆದು ಸಂಸ್ಕಾರವಂತರಾಗಬೇಕು ಎಂದರು.

ಭಗವದ್ಗೀತಾ ಅಭಿಯಾನದ ತಾಲೂಕು ಸಂಚಾಲಕ ಹಾಗೂ ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್ ಮಾತನಾಡಿ, ಭಗವದ್ಗೀತೆಯ ಅಧ್ಯಯನದಲ್ಲಿ ತೊಡಗುವುದು ಸಹ ದೇಶ ಸೇವೆಯಾಗಿದೆ. ಭಗವದ್ಗೀತೆಯು ಮನುಕುಲದ ಸಾರವಾಗಿದೆ. ಶಿಕ್ಷಣದಲ್ಲಿ ಸಂಸ್ಕಾರ ನೀಡುವ ಉದ್ದೇಶದಿಂದ ಅಭಿಯಾನ ನಡೆಯುತ್ತಿದೆ. ವ್ಯಕ್ತಿಯ ನಡತೆಯನ್ನು ಸುಧಾರಿಸಿ, ಸಾಮರಸ್ಯ ಮತ್ತು ಸಮನ್ವಯತೆ ಸಾಧಿಸುವ ಶಕ್ತಿ ಗೀತೆಯಲ್ಲಿದೆ. ಸಾತ್ವಿಕ ಮನೋಭಾವದಿಂದ ತೊಡಗಿಕೊಂಡು ಭಗವದ್ಗಿತೆಯನ್ನು ಅಧ್ಯಯನ ಮಾಡಬೇಕು. ಈ ಮೂಲಕ ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟಲು ಸಾಧ್ಯ ಎಂದರು.

ನಿವೃತ್ತ ಸಂಸ್ಕೃತ ಶಿಕ್ಷಕ ವಿದ್ವಾನ್ ವೆಂಕಟರಮಣ ಟಿ.ಭಟ್ ಶಿಬಿರ ಉದ್ಘಾಟಿಸಿದರು. ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಸಂಯೋಜಕ ಜಿ.ವಿ. ಹೆಗಡೆ, ಶ್ರೀ ಭಗವದ್ಘಿತಾ ಅಭಿಯಾನದ ಸಾಗರ ವಿಭಾಗ ಪ್ರಮುಖ್ ಮ.ಸ. ನಂಜುಂಡ ಸ್ವಾಮಿ, ಪ್ರಧಾನ ಸಂಚಾಲಕಿ ಜ್ಯೋತಿ ಮಣ್ಣೂರು, ತಾಲೂಕು ಗೌರವಾಧ್ಯಕ್ಷ ಪಾಣಿ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕಾಳಿಂಗರಾಜ್, ಪ್ರಶಿಕ್ಷಕಿಯರಾದ ಭಾರತಿ ಸುದರ್ಶನ, ಭಾಗ್ಯಾ ನರಸಿಂಹಮೂರ್ತಿ, ಲೆಕ್ಕಪರಿಶೋಧಕ ಭದರೀನಾಥ್, ರೂಪಾ ಮಧುಕೇಶ್ವರ್, ಸರಸ್ವತಿ ನಾವುಡಾ, ಲಕ್ಷ್ಮೀ ಮುರಳೀಧರ್ ಸೇರಿದಂತೆ ಇತರರಿದ್ದರು.