ನ್ಯೂಸ್

ವೈಚಾರಿಕ ಮನೋಭಾವ ರೂಢಿಸಿಕೊಳ್ಳಲಿ

ಚಿಕ್ಕೋಡಿ: ಭಯವೇ ಮೂಢನಂಬಿಕೆಗಳ ತಾಯಿ, ಕಾರಣ ಯಾವುದೇ ವಿಷಯಕ್ಕೆ ಭಯ ಪಡದೆ ಕೇಳುವುದನ್ನು ರೂಢಿಸಿಕೊಂಡು ಕ್ರಿಯಾಶೀಲ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಆರ್.ಡೋಂಗ್ರೆ ಹೇಳಿದರು.

ಇಲ್ಲಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೂಢನಂಬಿಕೆಗಳ ನಿರ್ಮೂಲನೆಯಲ್ಲಿ ವಿಜ್ಞಾನದ ಪಾತ್ರ ಎನ್ನುವ ವಿಷಯದ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಭ್ರಮೆ ಲೋಕದಿಂದ ಹೊರಬಂದು ವಾಸ್ತವ ಕಥೆ ಅರಿತು ವೈಚಾರಿಕ ಮನೋಭಾವನೆ ರೂಢಿಸಿಕೊಳ್ಳಬೇಕು. ಕಲ್ಲು, ಮಣ್ಣು ದೇವರಲ್ಲ ಗುರು ಹಿರಿಯರಲ್ಲಿ ನಂಬಿಕೆಯಿಡಿ. ಸತ್ಯ ಮತ್ತು ವಾಸ್ತವಗಳ ಆಧಾರದ ಮೇಲೆ ಅರಿತುಕೊಳ್ಳುವಂತೆ ಧೈರ್ಯ ತುಂಬುವುದೇ ವೈಜ್ಞಾನಿಕ ಮನೋಭಾವ. ವಿಷಯವನ್ನು ಪರಿಶೀಲನೆ ನಂತರವೇ ಒಪ್ಪಿಕೊಳ್ಳಬೇಕು. ಬಸವಣ್ಣನವರ ವಚನಗಳ ಮೂಲಕ ವೈಚಾರಿಕತೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಕೆಲವು ಪ್ರಯೋಗಗಳ ಮೂಲಕ ತೋರಿಸಿದರು.

ಡಾ. ಕನಕಾಚಲ ಕನಕಗಿರಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ಲಕ್ಷ್ಮಿ ಪಾಟೀಲ, ಭಾಗ್ಯಶ್ರೀ ದಡ್ಡೆಗೋಳ, ಜಯಸಿಂಹ ನಾವಿ ಅನಿಸಿಕೆ ಹಂಚಿಕೊಂಡರು. ಎಂ.ಎಚ್.ರಾವುತ್, ಪ್ರಶಾಂತ ಪತ್ತಾರ ಇತರರಿದ್ದರು. ಡಾ.ಎನ್.ಎಸ್.ಶಿಂಧೆ ಸ್ವಾಗತಿಸಿದರು. ಐಶ್ವರ್ಯ ನಾವಿ, ಶೃತಿ ಬತ್ತೆ ನಿರೂಪಿಸಿದರು. ಎಸ್.ಎಂ.ಚಂದ್ಗಡೆ ವಂದಿಸಿದರು.