ಇದು ಮೌಲ್ಯವಿರೋಧಿಗಳ ವಾಣಿ. ಇವರಿಗೆ ಹಿಂದಿನ ಕಾಲದಲ್ಲಿ ‘‘ಚಾರ್ವಾಕರು’’ ಎನ್ನುತ್ತಿದ್ದರು. ಈಗ ಇವರಿಗೆ ಇನ್ನೂ ಬೇರೆ ಬೇರೆ ಹೆಸರುಗಳಿವೆ. ಕೆಲವೊಮ್ಮೆ ಪ್ರತಿಷ್ಠಿತರ ಗುಂಪಿನಲ್ಲಿದ್ದುಕೊಂಡೇ ಕೆಲವರು ಈ ರೀತಿ ಧೋರಣೆ ತಾಳಿ, ದುರ್ವಾದ ಮಾಡುತ್ತಿದ್ದರು. ವೇದಗಳಲ್ಲಿಯೂ, ರಾಮಾಯಣ ಮಹಾಭಾರತಗಳಲ್ಲಿಯೂ ಉದಾಹರಣೆಗಳಿವೆ. ಈಗಿನ ಕಾಲದ ವಿಷಯಕ್ಕಂತೂ ಉದಾಹರಣೆಗಳು ಅವಶ್ಯವಿಲ್ಲ. ಎಲ್ಲೆಲ್ಲೂ ಅವೇ ತುಂಬಿವೆ. ಇಂತಹ ಇಂದಿನ ಜಗತ್ತಿಗೆ ‘‘ನಚಿಕೇತನ ಶ್ರದ್ಧಾವಾಣಿ’’ ಆಶ್ಚರ್ಯಮಯವಾಗಿಯೇ ಕಾಣುವುದು.
ವೇದದ ಹೆಸರಿನಲ್ಲಿ ‘‘ಹಿಂದೂ’’ಮತದ ಪರಿಚಯವನ್ನು ಮಾಡಿಕೊಡಲು ಹೊರಟ ಒಬ್ಬ ಪಾದ್ರಿಯು (ಮೋನಿಯರ್ ವಿಲಿಯಂಸ್) ತನ್ನ Hinduism (‘‘ಹಿಂದೂಧರ್ಮ’’) ಎಂಬ ಪುಸ್ತಕದ ಕೊನೆಯಲ್ಲಿ (ಪು.160) ಈ ಚಾರ್ವಾಕಮತದ ಆರೋಪಣೆಗಳನ್ನು ಇಂಗ್ಲಿಷಿನಲ್ಲಿ ಅನುವಾದಿಸಿ (ಮಾಧವಾಚಾರ್ಯರ ‘‘ಸರ್ವದರ್ಶನ ಸಂಗ್ರಹ’’ದಿಂದ) ಹೀಗೆ ಬರೆಯುತ್ತಾನೆ: ‘‘ಇದು ಹಿಂದುಗಳ ಸಮೂಹದಿಂದಲೇ ಒಳಗಿನ ಶತ್ರುಗಳ ಟೀಕೆ. ನಮ್ಮ ಗ್ರಂಥಕ್ಕೆ ಇದನ್ನು ಅನುಬಂಧವನ್ನಾಗಿ ಶಿಫಾರಸು ಮಾಡುತ್ತೇನೆ.
ಇಂಡಿಯಾ ದೇಶದಲ್ಲಿನ ಕ್ರೈಸ್ತ ಮಿಷನರಿಗಳು ಇದನ್ನು ವಿಶೇಷವಾಗಿ ಗಮನಿಸತಕ್ಕದ್ದು. ನಮ್ಮ ಪುಸ್ತಕದ 12ನೇ ಅಧ್ಯಾಯದ ಕೊನೆಯಲ್ಲಿ ಕೊಟ್ಟಿರುವ ವಿಡಂಬನೆಗಿಂತಲೂ ಇದು, ಬಹು ಮುಖವಾಗಿ ಬೆಳೆದುನಿಂತ ಹಿಂದೂಧರ್ಮವನ್ನು ತಡೆಗಟ್ಟಲು, ಇನ್ನೂ ಹೆಚ್ಚು ಫಲಕಾರಿಯಾಗಬಲ್ಲ ಸಾಧನ.’’
ಇದರರ್ಥ: ಈ ಪುಸ್ತಕ ಬರೆದವನಿಗೆ ಹಿಂದೂಧರ್ಮವನ್ನು ನಾಶ ಮಾಡುವುದೇ ಗುರಿ. ಅದಕ್ಕೆ ಮಾಡಬೇಕಾದ ಮೊದಲ ಕೆಲಸ ನಮ್ಮ ‘‘ಮೌಲ್ಯ’’ಗಳ ನಾಶ. ಇದನ್ನು ಕ್ರೈಸ್ತ ಮಿಷನರಿಗಳು ಹೊರಗಿನ ಶತ್ರುಗಳಾಗಿ ಮಾಡುತ್ತಲೇ ಇದ್ದಾರೆ. ಇವರಿಗೆ ಸಹಾಯಕರೇ ‘‘ನಮ್ಮೊಳಗಿನ ಚಾರ್ವಾಕರು’’ ಮತ್ತು ‘‘ಸಂಗಡ ಪ್ರಯಾಣಿಕರು.’’ ಈ ಮಹಾಶಯನು ತನ್ನ ಉದ್ದೇಶವನ್ನು ಮರೆಮಾಚದೆ ಬರೆದುಕೊಟ್ಟು ಉಪಕರಿಸಿದ್ದಾನೆ.
ಆದರೆ ಇವುಗಳನ್ನೋದಿಯೂ ಇನ್ನೂ ಇದೇ ಪುಸ್ತಕಗಳನ್ನು ‘‘ಹಿಂದೂ’’ಧರ್ಮದ ಪರಿಚಯಕ್ಕಾಗಿ ಶಿಫಾರಸು ಮಾಡುತ್ತಿರುವ ನಮ್ಮವರೆಂದೆನಿಸಿರುವವರ ಪ್ರಾಮಾಣಿಕತೆ, ಬುದ್ಧಿಮತ್ತತೆಗಳನ್ನು ಪ್ರಶ್ನಿಸಬೇಕಾಗಿದೆ. ಈ ಎಲ್ಲ ವೈರಿಗಳ ದೆಸೆಯಿಂದ ನಮ್ಮ ಧ್ಯೇಯಗಳನ್ನು ರಕ್ಷಿಸಿ, ಸಾರ್ಥಕವಾದ ಬದುಕನ್ನು ನಡೆಸಲು ನಮಗೆ ನಚಿಕೇತ ಹೊತ್ತಿಸಿಟ್ಟ ಜ್ಞಾನಾಗ್ನಿಯೇ ಬೆಳಕು ತೋರಿಸಬೇಕಾಗಿದೆ.
ಮೊದಲಿಗೆ, ಈ ‘‘ನಾಚಿಕೇತಾಗ್ನಿ’’ಯನ್ನು ಆರಿಸಲು ಮುಂದೆ ಬಂದವರು ಇಟ್ಟಿರುವ ಕುಹಕ ಪ್ರಶ್ನೆಗಳಿಗೆ ಪ್ರತಿಯಾಗಿ ಎರಡು ಮಾತನ್ನು ಕೇಳಿ ಮುಂದೆ ಸಾಗೋಣ. ‘‘ಸತ್ತವರಿಗೆ ಶ್ರಾದ್ಧ ಮಾಡದೇ ಇರುವವರೆಲ್ಲ ಸತ್ತೇ ಹೋಗಿದ್ದಾರೆಯೇ? ನಿತ್ಯ ಸ್ನಾನ ಮಾಡದೇ ಇರುವವರಿಗೆ ಏನಾಗಿದೆ? ದೇವರನ್ನು ಸ್ಮರಿಸದೆ ಇರುವವರು ಬದುಕಿಯೇ ಇಲ್ಲವೇ?’’ ಇತ್ಯಾದಿ ಕೇಳುವವರಿಗೆ ಈ ಮರುಪ್ರಶ್ನೆ: ‘‘ಮಲಮೂತ್ರಗಳಲ್ಲಿಯೇ ಬೆಳೆದು, ಅವುಗಳನ್ನೇ ತಿಂದು ‘ಬದುಕಿ’, ಅಲ್ಲಿಯೇ ಸಾಯುವ ಪ್ರಾಣಿಗಳೂ ಇವೆಯಲ್ಲವೆ? ಇದೇ ರೀತಿ ನಾವೂ ಏಕೆ ‘ಬದುಕ’ಬಾರದು?’’ ಎಂದು ಕೇಳುವವರು ಹಾಗೇ ಮಾಡಲಿ. ಯಾರ ಅಭ್ಯಂತರವೂ ಇಲ್ಲ. ಆದರೆ ಈ ‘ಬದುಕಿ’ಗೂ, ನಾವು ಪ್ರತಿಪಾದಿಸುವ ಜೀವನಕ್ರಮಕ್ಕೂ ವ್ಯತ್ಯಾಸ ಇರುವುದು ಜೀವನದ ಆಂತರಿಕ ಗುಣದಲ್ಲಿ ಎಂಬುದು ಅವರಿಗೂ ಗೊತ್ತಿದೆ.