ನ್ಯೂಸ್

ವೆಲ್‌ನೆಸ್ ಆನ್ ವೀಲ್ಸ್'ವೋಲ್ವೊ ಸಂಚಾರಿ ಸಮುದಾಯ ಕ್ಲಿನಿಕ್‌ಗೆ ಚಾಲನೆ / ಮನೆಬಾಗಿಲಿಗೆ ಆರೋಗ್ಯ ಸೇವೆ ಸದುಪಯೋಗಪಡಿಸಿಕೊಳ್ಳಿ / ಎಡಿಸಿ ಮಂಗಳಾ

ವಿಜಯವಾಣಿ ಸುದ್ದಿಜಾಲ ಕೋಲಾರ
ಹೃದಯರೋಗ ಹಾಗೂ ಕ್ಯಾನ್ಸರ್ ಸಂಬAಧಿತ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಉಚಿತ ತಪಾಸಣೆ ಒದಗಿಸುವ `ಚಕ್ರಗಳ ಮೇಲೆ ಆರೋಗ್ಯ' ವೋಲ್ವೊ ಸಂಚಾರಿ ಸಮುದಾಯ ಆರೋಗ್ಯ ಕ್ಲಿನಿಕ್‌ಗೆ ಅಪರ ಜಿಲ್ಲಾಧಿಕಾರಿ ಮಂಗಳಾ ಚಾಲನೆ ನೀಡಿ, ಸಾರ್ವಜನಿಕರು ಈ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾರಾಯಣ ಹೃದಯಾಲಯ, ವೋಲ್ವೊ ಕಂಪನಿ ಹಾಗೂ ಸಿಎಸ್‌ಆರ್ ನಿಧಿ ಸಹಯೋಗದಲ್ಲಿ ಸಿದ್ದಗೊಂಡಿರುವ `ಚಕ್ರಗಳ ಮೇಲೆ ಆರೋಗ್ಯ' ವೋಲ್ವೊ ಸಂಚಾರಿ ಕ್ಲಿನಿಕ್‌ಗೆ ಜಿಲ್ಲಾಸ್ಪತ್ರೆ ಮುಂಭಾಗ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಸಿಎಸ್‌ಆರ್ ನಿಧಿಯಿಂದ ಸಿದ್ದಗೊಂಡಿರುವ ಅತ್ಯಂತ ಸುಸಜ್ಜಿತ ಸೌಲಭ್ಯಗಳಿರುವ ಈ ಸಂಚಾರಿ ಕ್ಲಿನಿಕ್‌ನಲ್ಲಿ ಹೃದಯ ಸಂಬAಧಿ ರೋಗಿಗಳಿಗೆ ಉಚಿತ ತಪಾಸಣೆ, ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಮ್ಯಾಮೋಗ್ರಾಂ ಸಾಧನಗಳು, ಇಸಿಜಿ, ಎಕೋ, ರಕ್ತಪರೀಕ್ಷೆ ಮತ್ತಿತರ ಆಧುನಿಕ ಸೌಲಭ್ಯಗಳನ್ನು ಈ ಸಂಚಾರಿ ಕ್ಲಿನಿಕ್ ಹೊಂದಿದೆ ಎಂದರು.

ಕ್ಯಾನ್ಸರ್ ಆರಂಭದಲ್ಲೇ ಪತ್ತೆ ಹಚ್ಚಿದಲ್ಲಿ ಗುಣಪಡಿಸುವುದರ ಜತೆ ಜೀವ ಕಾಪಾಡಬಹುದಾಗಿದೆ. ಆದರೆ ಗ್ರಾಮೀಣ ಜನತೆಯಲ್ಲಿ ಅರಿವಿನ ಕೊರತೆಯಿಂದಾಗಿ ಇಂದು ಅನೇಕರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.

ಕ್ಯಾನ್ಸರ್, ಹೃದಯ ತಪಾಸಣೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ನೀಡಬೇಕಾದ ಕಾರಣ ಅನೇಕರು ತಪಾಸಣೆಯಿಂದ ದೂರ ಉಳಿಯುತ್ತಿದ್ದಾರೆ ಇದು ಅವರ ಮುಂದಿನ ಬದುಕನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದರು.

`ವೆಲ್‌ನೆಸ್ ಆನ್ ವೀಲ್ಸ್' ಎಂಬ ಶೀರ್ಷಿಕೆಯೊಂದಿಗೆ ವೋಲ್ವೊ ಕಂಪನಿ ಸಿದ್ದಪಡಿಸಿರುವ ಈ ಸಂಚಾರಿ ಸಮುದಾಯ ಆರೋಗ್ಯ ಕ್ಲಿನಿಕ್ ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೂ ಸಂಚರಿಸಲಿದ್ದು, ಬಡತನದಿಂದ ಹೃದಯ, ಕ್ಯಾನ್ಸರ್ ತಪಾಸಣೆಗೆ ಒಳಗಾಗದೇ ಕಷ್ಟ ಅನುಭವಿಸುತ್ತಿರುವ ಜನರು ಇದರ ಪ್ರಯೋಜನ ಪಡೆಯಬೇಕು. ಉತ್ತಮ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಬೇಕು ಎಂದು ಜಿಲ್ಲೆಯ ಜನತೆಗೆ ಎಡಿಸಿ ಅವರು ಮನವಿ ಮಾಡಿದರು.

ವೋಲ್ವೊ ಗ್ರೂಪ್ ಆಫ್ ಇಂಡಿಯಾದ ಸಿಎಸ್‌ಆರ್ ನಿರ್ದೇಶಕ ಹಾಗೂ ವೆಲ್‌ನೆಸ್ ಆನ್ ವೀಲ್ಸ್ ಯೋಜನೆಯ ಮುಖ್ಯಸ್ಥ ಜಿ.ವಿ.ರಾವ್ ಮಾತನಾಡಿ, ವೋಲ್ವೊ ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯಿಂದ ಸಮುದಾಯದ ಆರೋಗ್ಯ ರಕ್ಷಣೆಗೆ ಒತ್ತು ನೀಡುತ್ತಿದ್ದು, ಗ್ರಾಮೀಣ ಬಡ ರೋಗಿಗಳನ್ನು ಹೃದಯ, ಕ್ಯಾನ್ಸರ್ ಸಮಸ್ಯೆಗಳಿಂದ ಮುಕ್ತಗೊಳಿಸಿ ಉತ್ತಮ ಜೀವನ ನಡೆಸುವಂತಾಗಲಿ ಎಂಬ ಧ್ಯೇಯದೊಂದಿಗೆ `ಚಕ್ರಗಳ ಮೇಲೆ ಆರೋಗ್ಯ' ವೋಲ್ವೊ ಸಂಚಾರಿ ಸಮುದಾಯ ಆರೋಗ್ಯ ಕ್ಲಿನಿಕ್ ಸಿದ್ದಪಡಿಸಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಸಮುದಾಯದ ಮನೆಬಾಗಿಲಿಗೆ ಆರೋಗ್ಯ ತಲುಪಿಸುವ ಅತ್ಯಂತ ಉತ್ತಮ ಪ್ರಯತ್ನ ಇದಾಗಿದ್ದು, ಜಿಲ್ಲೆಯ ಗ್ರಾಮೀಣ ಬಡಜನತೆಯನ್ನು ಕ್ಯಾನ್ಸರ್ ರೋಗ ಮುಕ್ತವಾಗಿಸಿ ಉತ್ತಮ ಬದುಕು ನೀಡಲು ಸಹಕಾರಿಯಾಗಲಿ ಎಂದು ಆಶಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಕಂಪನಿಗಳ ಸಾಮಾಜಿಕ ಕಾಳಜಿಯ ಈ ಅನುದಾನ ಸದ್ಬಳಕೆಯಾಗಿದೆ. ದೊಡ್ಡ ಆಸ್ಪತ್ರೆಗಳಿಗೆ ಹೋಗಿ ತಪಾಸಣೆಗೆ ಒಳಗಾಗಲು ಸಾಧ್ಯವಿಲ್ಲದ ಆರ್ಥಿಕ ಶಕ್ತಿಯಿಲ್ಲದ ಜನತೆಗೆ ಇದು ಸಂಜೀವಿನಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಳಗ್ಗೆ ೧೦ ಗಂಟೆಯಿAದ ಸಂಜೆ ೪-೩೦ ರವರೆಗೂ ನಡೆದ ಸಂಚಾರಿ ಕ್ಲಿನಿಕ್‌ನಲ್ಲಿ ೩೦ ಮಂದಿ ಇಸಿಜಿ, ೨೨ ಮಂದಿ ಎಕೋ, ೧೨ ಮಹಿಳೆಯರು ಸ್ತನ ಕ್ಯಾನ್ಸರ್ ಪತ್ತೆಯ ಮ್ಯಾಮೋಗ್ರಾಂ ಚಿಕಿತ್ಸೆಗೆ ಹಾಗೂ ೩೦ ಮಂದಿ ರಕ್ತ ಪರೀಕ್ಷೆಗೆ ಒಳಗಾದರು.

ಜಿಲ್ಲಾಸ್ಪತ್ರೆಯ ಆರ್‌ಎಂಒ ಡಾ.ಬಾಲಸುಂದರ್, ನಾರಾಯಣಹೃದಯಾಲಯದ ಹೆಲ್ತ್ ಟೀಮ್ ಮುಖ್ಯಸ್ಥ ಡಾ.ದೇವರಾಜ್, ನಾರಾಯಣ ಹೃದಯಾಲಯದ ವೈದ್ಯರು ಹಾಗೂ ೧೦ ಮಂದಿ ತಾಂತ್ರಿಕರ ತಂಡ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೭ : ಕೋಲಾರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾರಾಯಣ ಹೃದಯಾಲಯ, ವೋಲ್ವೊ ಕಂಪನಿ ಹಾಗೂ ಸಿಎಸ್‌ಆರ್ ನಿಧಿ ಸಹಯೋಗದಲ್ಲಿ ಸಿದ್ದಗೊಂಡಿರುವ `ಚಕ್ರಗಳ ಮೇಲೆ ಆರೋಗ್ಯ' ವೋಲ್ವೊ ಸಂಚಾರಿ ಕ್ಲಿನಿಕ್‌ಗೆ ಜಿಲ್ಲಾಸ್ಪತ್ರೆ ಮುಂಭಾಗ ಅಪರ ಜಿಲ್ಲಾಧಿಕಾರಿ ಮಂಗಳಾ ಚಾಲನೆ ನೀಡಿದರು.

ಚಿತ್ರ ೧೦ ಕೆ.ಎಲ್.ಆರ್. ೦೭ಎ : ಬುಧವಾರ ಒಂದೇ ದಿನ ೬೭ಕ್ಕೂ ಹೆಚ್ಚು ಮಂದಿ ಹೃದಯ, ಸ್ತನ ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆಗಳ ತಪಾಸಣೆಗೆ ಒಳಗಾದರು. ಅಪರ ಜಿಲ್ಲಾಧಿಕಾರಿ ಮಂಗಳಾ ಸೇರಿದಂತೆ ನಾರಾಯಣ ಹೃದಯಾಲಯದ ತಜ್ಞರ ತಂಡ ಉಚಿತ ತಪಾಸಣೆ ನಡೆಸಿತು.