ನ್ಯೂಸ್

ವೃದ್ಧೆ ಹತ್ಯೆ ಮಾಡಿ ಚಿನ್ನಾಭರಣ ಕಳವು

ಚನ್ನರಾಯಪಟ್ಟಣ: ಒಂಟಿಯಾಗಿ ವಾಸವಿದ್ದ ವೃದ್ಧೆಯನ್ನು ಹತ್ಯೆ ಮಾಡಿದ ಖದೀಮರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಕಗ್ಗಲಿ ಕಾವಲು ಗ್ರಾಮದ ಕಮಲಮ್ಮ (68) ಹತ್ಯೆಯಾದವರು. ನಿವೃತ್ತ ಗ್ರಾಮ ಲೆಕ್ಕಿಗರಾಗಿದ್ದ ಅವರ ಪತಿ ಕೆ.ಜಿ.ಪುಟ್ಟಲಕ್ಕೇಗೌಡ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ನಂತರ ಕಮಲಮ್ಮ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮಂಗಳವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯ ಕೊಲೆ ಮಾಡಿ ಚಿನ್ನಾಭರಣ ದೋಚಿ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು. ಅಕ್ಕ ಪಕ್ಕದ ಮನೆಯವರು ರಾತ್ರಿಯಾದರೂ ಮನೆಯ ಲೈಟ್ ಹಾಕಿಲ್ಲದಿರುವುದನ್ನು ಗಮನಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಮನೆಗೆ ಆಗಮಿಸಿದ ಸಂಬಂಧಿಯೊಬ್ಬರು ನೋಡಿದಾಗ ಕಮಲಮ್ಮ ಮಂಚದ ಮೇಲೆ ಮೃತಪಟ್ಟಿರುವುದನ್ನು ಕಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಿಗಳು ಸಹಜವಾಗಿ ಮೃತಪಟ್ಟಿರಬಹುದೆಂದು ತಿಳಿದು ಶವವನ್ನು ಮನೆಯಿಂದ ಹೊರತಂದು ಇಟ್ಟಿದ್ದಾರೆ. ಬುಧವಾರ ಬೆಳಗ್ಗೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಕಿವಿ ಹಾಗೂ ಕುತ್ತಿಗೆ ಬಳಿ ಗಾಯವಾಗಿರುವುದನ್ನು ಗಮನಿಸಿದ ಕುಟುಂಬದವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಶವವನ್ನು ಹಾಸನ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ಶವ ಪರೀಕ್ಷೆ ನಡೆಸಿದ ವೈದ್ಯರು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಕಮಲಮ್ಮ ಅವರ ಸೋದರ ಸಂಬಂಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.